ಮುಡಾ ಹೆಸರು ಮೈಸೂರಿಗೆ ಸೀಮಿತ ಅಲ್ಲ,ಮುಡಾ ವಾಸನೆ ರಾಜ್ಯ ವ್ಯಾಪಿಸಿದೆ.ಸ್ವತಂತ್ರ ಭಾರತದಲ್ಲಿ ಹೊಸರೀತಿಯ,ವಸತಿ ಹೆಸರಲ್ಲಿ ವಸಾಹತುಶಾಹಿ ಯೋಜನೆ.ಪ್ರಜೆ ತನ್ನದೇ ಜಮೀನಿನಲ್ಲಿ ಮನೆ ಕಟ್ಟಲು ಮುಡಾ ಅನುಮತಿ ತೆಗೆದುಕೊಳ್ಳಲು ಅನುಭವಿಸುವ ಕಷ್ಟ ಮನೆ ಕಟ್ಟಿದವರಿಗೆ ಗೊತ್ತು,ಹಣ ಇದ್ದವರು ಮಧ್ಯವರ್ತಿಗಳಿಗೆ ಹಣ ಕೊಟ್ಟು ಕೆಲಸ ಮಾಡಿಸಿ ಕೊಂಡವರಿಗೆ ಆ ಕಷ್ಟ ಗೊತ್ತಾಗುವುದಿಲ್ಲ,ಮಧ್ಯವರ್ತಿ ಪಂಗನಾಮ ಹಾಕಿದಾಗ ಅರಿವಾಗಿರಬಹುದು.
ಸರಕಾರ ಕೃಷಿ ಜಮೀನಿಗೆ ತೀರ್ವೆ ರೂಪದಲ್ಲಿ ಈಗಲೂ ಸಣ್ಣ ಮೊತ್ತವನ್ನೇ ವಿಧಿಸುತ್ತದೆ ಆದರೆ ಮುಡಾ ರಸ್ತೆ ಅಭಿವೃದ್ಧಿ,ಚರಂಡಿ,ದಾರಿದೀಪ,ಕೆರೆ ಅಭಿವೃದ್ಧಿ ನೆಪದಲ್ಲಿ ಸಾವಿರಾರು ರೂಪಾಯಿ ವಸೂಲು ಮಾಡುತ್ತದೆ.ನಂತರ ಆ ಅಭಿವೃದ್ಧಿ ಎಲ್ಲಿ ಮಾಡಿದೆ ಎಂದು ದುರ್ಬಿನ್ ನಲ್ಲಿ ನೋಡಬೇಕು.
ಕೃಷಿಕರಿಂದ ಕಡಿಮೆ ಬೆಲೆಗೆ ಜಮೀನು ಖರೀದಿಸಿ ಮಾರುಕಟ್ಟೆಯಲ್ಲಿ ಇಲ್ಲದ ದೊಡ್ಡ ಮೊತ್ತಕ್ಕೆ ಸೈಟ್ ಗಳನ್ನು ಮಾರಾಟ ಮಾಡುವುದು ಸುಲಿಗೆ ಅಲ್ಲದೆ ಮತ್ತೇನು?ಸರಕಾರಕ್ಕೆ ಈ ಮುಡಾ ಹೆಸರಿನ ಮಾಫಿಯಾ ಯಾಕೆ ಬೇಕು?ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳು ಪ್ರಾಮಾಣಿಕವಾಗಿ ವ್ಯವಸ್ಥಿತ , ಸುಸಜ್ಜಿತ ಸೈಟ್ ಗಳನ್ನು ಆಕರ್ಷಕ ಬೆಲೆಗೆ ಮಾರಾಟ ಮಾಡುತ್ತಿರುವಾಗ ಸರಕಾರಕ್ಕೆ ಈ ಕಳಂಕಿತ ವ್ಯಾಪಾರ ಯಾಕೆ ಬೇಕು.ರಾಜ್ಯದ್ದಾದ್ಯಂತ ಮುಡಾ ಹೆಸರಿನ ನಗರ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸಿ ಜನ ಪ್ರತಿನಿಧಿಗಳು ಆಯ್ಕೆಗೊಳಿಸಿದ ಪಂಚಾಯತ್ , ಪುರಸಭೆ,ನಗರಪಾಲಿಕೆಗೆ ನಗರ ಅಭಿವೃದ್ಧಿಯ ಜವಾಬ್ದಾರಿ ಕೊಡಲು ಕಾನೂನಲ್ಲಿ ಕೂಡಲೇ ತಿದ್ದುಪಡಿ ಮಾಡಿ ಭೂ ಮಾಫಿಯಾ ನಿಲ್ಲಿಸಲಿ.
-ಚಂದ್ರಶೇಖರ ಹೆಬ್ಬಾರ್ ಕೊಲ್ಯ