ಪಾವಗಡ:ಜನ ವಸತಿ ಪ್ರದೇಶ ಮತ್ತು ದೇವಸ್ಥಾನದ ದಾರಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ದಾರಿಯನ್ನು ಬಿಡಿಸಿಕೊಡುವಂತೆ ಕೆ.ರಾಮಪುರ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಜಾನಕಿರಾಮ್‌ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ದಾರಿ ಬಿಡಿಸಿ ಕೊಡುವಂತೆ ಮನವಿ ಪತ್ರ ಸಲ್ಲಿಸಿದ ಬಳಿಕ ಮುಖಂಡರಾದ ಎ.ಗೋಪಿ ರವರು ಮಾತನಾಡಿ ಅನಾದಿಕಾಲದಿಂದಲೂ ಜನ ವಸತಿ ಪ್ರದೇಶಕ್ಕೆ ಹಾಗೂ ಜಮೀನುಗಳಿಗೆ, ದೇವಸ್ಥಾನಕ್ಕೆ ದಾರಿ ಇತ್ತು ಆದರೆ ಆದಿನಾರಾಯಣ ಎಂಬುವವರು ದಾರಿಯಲ್ಲಿ ಕಲ್ಲು ಬಂಡೆಗಳನ್ನು ಹಾಕಿ ನಿತ್ಯ ಜನತೆಗೆ ಓಡಾಡಲು ಬೀಡದೇ ಅಡ್ಡಿ ಪಡಿಸುತ್ತಿದ್ದಾರೆ, ಇದೇ ವಿಚಾರವಾಗಿ ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ನಡೆದ “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜುರವರು ಸ್ಥಳ ಪರಿಶೀಲಿಸಿ ತಕ್ಷಣ ಜನತೆಗೆ ಓಡಾಡಲು ದಾರಿಯನ್ನು ಬಿಡುವಂತೆ ಸೂಚಿಸಿದ್ದರು, ಆದರೆ ಎರಡು ವರ್ಷಗಳೇ ಕಳೆದರೂ ಇಂದಿಗೂ ದಾರಿ ಬಿಟ್ಟಲ್ಲ ಇದರಿಂದ ನಮಗೆ ಬಹಳ ತೊಂದರೆಯಾಗುತ್ತಿದೆ, ಆದ್ದರಿಂದ ಸಾರ್ವಜನಿಕರಿಗೆ ಓಡಾಡಲು ದಾರಿ ಬಿಡಿಸಿ ಕೊಡುವಂತೆ ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಕಾರ್ಯ ನಿರ್ವಾಹಣಾಧಿಕಾರಿ ಜನ ವಸತಿ ಪ್ರದೇಶದಲ್ಲಿ ಜನತೆಗೆ ಓಡಾಡಲು ಯಾರು ಕೂಡಾ ಅಡ್ಡಿ ಪಡಿಸುವಂತಿಲ್ಲ, ಸ್ಥಳ ಪರಿಶೀಲನೆ ನಡೆಸಿ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೃಷ್ಣಪ್ಪ, ಹನುಮಂತರಾಯ, ರಾಮಲಿಂಗಪ್ಪ, ಬಲರಾಮ, ರಾಮಾಂಜಿನೇಯ, ಉಷರಾಣಿ, ರತ್ನಮ್ಮ, ಮುತ್ಯಾಲಮ್ಮ ಉಪಸ್ಥಿತರಿದ್ದರು.
ವರದಿ:ಕೆ.ಮಾರುತಿ ಮುರಳಿ