ಬೆಂಗಳೂರು:ಲಲಿತಾ ಸಹಸ್ರ ನಾಮದಲ್ಲಿ ಒಂದು ಸಾಲು ಬರುತ್ತದೆ.ಅಂತರಂಗದ ಆರಾಧನೆಗೆ ದೇವಿ ಸುಲಭದಲ್ಲಿ ದಕ್ಕುವವಳು,ಬಹರ್ಮುಖ ಚಿಂತನೆಗೆ ಸುಲಭಕ್ಕೆ ನಿಲುಕದವಳು.ಆತ್ಮ ಶಕ್ತಿ ನಮ್ಮೊಳಗಿನ ಅಂತ: ಶಕ್ತಿ,ಅಂಧತ್ವ, ಶಾಶ್ವತ ಕುರುಡು ಎಂಬುದು ಬಹುದೊಡ್ಡ ಸವಾಲು. ಇದನ್ನು ಸಮರ್ಥವಾಗಿ ಎದುರಿಸಲು ಎಷ್ಟು ಧೈರ್ಯ ಇದ್ದರೂ ಸಾಲದು. ಬೇರೆ ಅಂಗ ವೈಫಲ್ಯಗಳಲ್ಲೇ ಅತಿಯಾಗಿ ನಮ್ಮನ್ನು ಕಾಡಿಸುವುದು ಅಂಧತ್ವ. ಈ ಅಂಧತ್ವವನ್ನು ಹೊಂದಿದವರಿಗೆ ಹೊರಗಣ ಪ್ರಪಂಚವನ್ನು ಕಾಣಲೇ ಆಗದು. ಏನನ್ನೂ ಅನುಭೂತಿಸಲೇ ಸಾಧ್ಯವಾಗದು. ಜನರ ಸಂಪರ್ಕ, ಓದುವಿಕೆ, ಬರೆಯುವಿಕೆ, ಎಲ್ಲವುದಕ್ಕೂ ಬೇರೊಬ್ಬರ ಸಹಾಯ ಅತ್ಯಗತ್ಯ. ಬ್ರೈಲ್ ಲಿಪಿಯ ಮುಖಾಂತರವೇ ಎಲ್ಲವನ್ನೂ ಓದಿಕೊಳ್ಳಬೇಕು, ಕಲಿಯಬೇಕು. ಆದರೆ ಇವೆಲ್ಲವನ್ನೂ ಜಯಿಸಿ ಸ್ಪೂರ್ತಿದಾಯಕ ಬದುಕು ಬದುಕುತ್ತಿರುವವರೇ ಶ್ರೀಧರ್ ಟಿಎಸ್ ಅವರು.
ಶ್ರೀ ಶ್ರೀಧರ ಅವರ ಮಹಾನ್ ಸಾಧನೆಗಾಗಿ,ಅವರ ಪಾಲಕರಿಗೆ ಸನ್ಮಾನ ಮಾಡಿದ ಬಹಳ ಅಪರೂಪದ ಕಾರ್ಯಕ್ರಮ ಇಂದು ಆನಂದ ರಾವ್ ವೃತ್ತದ ಬಳಿ ಇರುವ ಕ.ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿತು.ಶ್ರೀ ಶ್ರೀಧರ್ ಟಿಎಸ್ ಅವರು ತನ್ನನ್ನು ಪೋಷಿಸಿದ ಪಾಲಕರನ್ನು ಹಾಗೂ ತನ್ನ ಕೆಲವು ಸಾಧನೆಗೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು. ಪಾಲಕರನ್ನು ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮೊದಲು ಪ್ರಾಚಾರ್ಯ ಜಿ ವಿ ಹೆಗಡೆ ಅವರು ಶ್ರೀಧರ್ ಟಿ ಎಸ್ ಅವರು ನಡೆದು ಬಂದ ದಾರಿ, ಅವರು ಗಳಿಸಿದ ಶಿಕ್ಷಣ,ಗಣಕಯಂತ್ರದಲ್ಲಿ ಅವರು ಪಡೆದ ಪ್ರಾವೀಣ್ಯತೆ ಮುಂತಾದವುಗಳ ಕುರಿತು ಅವರ ಘನ ವ್ಯಕ್ತಿತ್ವ ಪರಿಚಯ ಮನಮುಟ್ಟುವಂತೆ ಮಾಡಿದರು.
ವಿದ್ವಾಂಸ,ಲೇಖಕ ಡಾ. ನವೀನ್ ಭಟ್ ಗಂಗೋತ್ರಿ ಅವರು ಅರ್ಥಶಾಸ್ತ್ರದ ಗ್ರಂಥವಾಗಿ ಪಂಚತಂತ್ರದ ಪರಿಚಯ ಕುರಿತು ಅಮೋಘವಾದ ಉಪನ್ಯಾಸ ನೀಡಿದರು.
ಅವರ ಉಪನ್ಯಾಸದಲ್ಲಿ ಚಾಣಕ್ಯ ಹಲವು ನೂರು ವರ್ಷಗಳ ಮೊದಲೇ ಜಾರಿಗೆ ತಂದಿರುವ ತೆರಿಗೆ ಪದ್ಧತಿ, ಸಾಮಾಜಿಕ ಸುಧಾರಣಾ ಪದ್ಧತಿ ಮುಂತಾದವು ಇಂದಿಗೂ ಎಷ್ಟು ಪ್ರಸ್ತುತವಾಗಿದೆ ಎಂಬುದನ್ನು ತಿಳಿಸಿ
ಅರ್ಥಶಾಸ್ತ್ರವು ಭಾರತದಲ್ಲಿ ಬೆಳೆದುಬಂದ ರಾಜ್ಯಚಿಂತನೆಯ ಪರಂಪರೆಯಾಗಿದೆ. ಸಾಮಾನ್ಯವಾಗಿ ಅರ್ಥಶಾಸ್ತ್ರವೆಂದಾಗ ಆಚಾರ್ಯ ಕೌಟಿಲ್ಯನ ನೆನಪು ಮಾಡಿಕೊಳ್ಳಲಾಗುತ್ತದಾದರೂ ವಸ್ತುತ: ಅರ್ಥಶಾಸ್ತ್ರವು ಅನೂಚಾನವಾದ ಒಂದು ಪರಂಪರೆಯಾಗಿದೆ. ಭಾರತೀಯ ಕಥಾಪರಂಪರೆಯು ಸರಳ ಸುಗಮ ರೀತಿಯಲ್ಲಿ ಬದುಕಿನ ವ್ಯವಹಾರವನ್ನು, ರಾಜ್ಯ ನೀತಿಯನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಪಂಚತಂತ್ರವು ಪ್ರಸಿದ್ಧವಾದ ಐದುಬಗೆಯ ತಂತ್ರಗಳನ್ನು ಮನೋಜ್ಞವಾದ ರೀತಿಯಲ್ಲಿ ಪ್ರಸ್ತಾವಿಸುತ್ತದೆ. ರಾಜ್ಯ ನಿರ್ವಹಣೆಯಲ್ಲಿ ಮುಖ್ಯವಾಗುವ ಷಾಡ್ಗುಣ್ಯವನ್ನು ಪಂಚತಂತ್ರವು ಕಾಕೋಲುಕೀಯದ ಮೂಲಕ ಪ್ರಸ್ತುತಪಡಿಸುವ ರೀತಿಯೇ ಅನನ್ಯ ಎಂದು ಹೇಳಿದರು.
ಶಿವಮೊಗ್ಗದ ಭಾರತೀಯ ಅಂಗವಿಕರ ಸಬಲೀಕರಣ ಸಂಘ ಇದರ ಸಂಸ್ತಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಲೇಖಕ ಶ್ರೀ ನವೀನ ಭಟ್ ಗಂಗೋತ್ರಿ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.
ಲೇಖಕ, ಅಂಕಣಕಾರ, ಶಿಕ್ಷಣ ತಜ್ಞ, ಪ್ರೊಫೆಸರ್ ಡಾ.ಜಿ ಎ ಹೆಗಡೆ ಸೋಂದಾ ಅವರು ಲಕ್ಷ್ಮೀ ಸ್ವಯಂವರ ಕುರಿತು ಅವರದೇ ವಿಶೇಷ ಪ್ರಯೋಗದಲ್ಲಿ ವಿನೂತನ ಕಾರ್ಯಕ್ರಮವಾಗಿ ಪುರಾಣ ಪುಣ್ಯಕಥನ ವೈಭವವನ್ನು ನಡೆಸಿ ಜನರ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕವಿ, ಕ್ರೀಡಾಪಟು, ಚಿಂತಕ ಸಂಘದ ನಿವೃತ್ತ ಆರ್ಥಿಕ ಸಲಹೆಗಾರ ಎಂ ಎಸ್ ವೆಂಕಟೇಶ್ ಸಾಂದರ್ಭಿಕವಾಗಿ ಅಧ್ಯಕ್ಷೀಯ ನುಡಿಗಳನ್ನು ನುಡಿದು ಜನರನ್ನು ಚಿಂತನೆಗೆ ಪ್ರೇರೇಪಿಸಿದರು.ಅವರ ಮಾತುಗಳು ಇಂದಿನ ಪರಿಸ್ಥಿತಿಯಲ್ಲಿ ಜನರನ್ನು ವಿಶೇಷವಾಗಿ ಆಕರ್ಷಿಸಿತು.
ಭೂಮಿ ಬುಕ್ಸ್ ಪ್ರಕಾಶನದ ಮಾಲೀಕರಾದ ವಿಶಾಲಾಕ್ಷಿ ಶರ್ಮ ಅವರು ಪರಿಸರ ಪಾಠ ಮಾಡಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಹೇಳಿ, ಸಂಘಕ್ಕೆ ಹಲವು ಸ್ಟೀಲ್ ಪರಿಕರಗಳನ್ನು ದೇಣಿಗೆಯಾಗಿ ನೀಡಿ ಎಲ್ಲರ ಶ್ಲಾಘನೆಗೆ ಕಾರಣರಾದರು.
ಶ್ರೀಮತಿ ಪದ್ಮಾವತಿ ಹೆಚ್ ಎಂ ಎಲ್ಲರನ್ನೂ ಸ್ವಾಗತಿಸಿದರು. ಡಾ.ಅಂಬುಜಾಕ್ಷಿ ಬೀರೇಶ್ ಅವರು ಉಪನ್ಯಾಸಕಾರರ ಹಾಗೂ ಕೀರ್ತನಾಕಾರರ ಪರಿಚಯ ಮಾಡಿಕೊಟ್ಟರು.
ಸಂಘದ ಪದಾಧಿಕಾರಿಗಳಾದ ಗಿರೀಶ್ ಅವರು ಅಧ್ಯಕ್ಷರ ಪರಿಚಯ ಮಾಡಿ ಎಲ್ಲರಿಗೂ ಗೌರವ ಸಮರ್ಪಿಸಿ, ಸನ್ಮಾನದಲ್ಲಿ ಸಹಕರಿಸಿದರು. ನಿವೃತ್ತ ಉಪ ಲೆಕ್ಕ ನಿಯಂತ್ರಣಾಧಿಕಾರಿ ಕೆಂಪೇಗೌಡ ಅವರು ಕಾರ್ಯಕ್ರಮವನ್ನು ಚಂದವಾಗಿ ನಿರೂಪಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರನ್ನೂ ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ನಿತ್ಯಾನಂದಪ್ಪ,ಕವಿಗಳಾದ ಕೊಪ್ಪರಮ್ಮ ಅನ್ನಪೂರ್ಣ,ಪ್ರಭಾಕರ್ ಗಂಗೊಳ್ಳಿ,ಸೊನ್ನದ, ಪರಿಸರ ಚಂದ್ರಶೇಖರ ನಿವೃತ್ತ ಮುಖ್ಯ ಇಂಜಿನಿಯರ್ ಶಂಕರ, ಸಂಪತ್ಕುಮಾರ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.