ಹಲವು ವರುಷಗಳ ಕಾಲ
ಎಲ್ಲವೂ ನನ್ನ ಕೈಯಲ್ಲಿಯೇ
ಇದೆ ಎಂದುಕೊಂಡಿದ್ದೆ
ಅಷ್ಟೇ ಅಲ್ಲ ಎಲ್ಲವೂ
ನನ್ನದೇ ಕೈಯಲ್ಲಿ ಇತ್ತು
ಆದರೀಗ ಅದ್ಯಾವುದೂ
ವಾಸ್ತವವಲ್ಲ
ನನ್ನ ಬದುಕಿನ ಎಲ್ಲಾ ಭಾವಗಳ
ಬಂಧಿಸಿ, ಮರೆಯಾಗಿಸಿ
ಇಲ್ಲದಿರುವುದೆಲ್ಲವೂ
ನನ್ನ ಬಳಿ ಇದೆ ಎಂಬ
ಭ್ರಮೆಯಲಿ ಬದುಕಿನ ಒಲವ ಕಂಡೆ
ಆದರೀಗ ಭ್ರಮೆಯೇ ಕಳಚಿ
ಭಾವನೆಗಳ ದಾಳಿಗೆ ಸಿಲುಕಿ
ಬಂಧಿತೆಯಾಗಿರುವೆ
ಅಪರಾಧಿ ಸ್ಥಾನದಲಿ…
ಭಾವನೆಗಳ ಕಲಹ ಮನವನೇ
ಕಳಚಿ ಕೆಡವಿದೆ
ಭ್ರಮೆಯೇ ಬದುಕೆಂದು
ನೆಲೆಯನೇ ಇಲ್ಲವಾಗಿಸಿದೆಯೆಂದು
ಬದುಕು ಬವಣೆಗಳ ಬಯಲು
ಅಲ್ಲಿ ನಾನು ನನ್ನದು ಎಂಬ ಭಾವ
ಹಸನಾಗಿರೆ ಬಾಳು ಹಸಿರು
ವ್ಯಸನವಾಗಿರೆ ವ್ಯಂಗ್ಯಕೆ ವ್ಯಾಖ್ಯಾನ
ಬದುಕ ಹಸನಾಗಿಸುವುದು
ವ್ಯಂಗ್ಯಕ್ಕೆ ವ್ಯಾಖ್ಯಾನವಾಗಿಸುವುದು
ಎಲ್ಲವೂ ನಮ್ಮದೇ ಕೈಲಿರೆ
ಭ್ರಮೆಯ ಕೂಸಾಗುವುದಾದರೂ
ಏತಕೆ?
ಒಮ್ಮೆ
ಬಂದಂತೆ ಬದುಕ ಸ್ವೀಕರಿಸಿ ನೋಡು…
-ಲೋಹಿತೇಶ್ವರಿ ಎಸ್ ಪಿ
ಚಳ್ಳಕೆರೆ