ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಗುರುವಾರ ಮಹತ್ವಾಕಾಂಕ್ಷಿ ತಾಲೂಕಿನ ಸಂಪೂರ್ಣತಾ ಅಭಿಯಾನ ಅಂಗವಾಗಿ ಕೃಷಿ ಇಲಾಖೆ ಯಾದಗಿರಿ ವತಿಯಿಂದ ಮಣ್ಣು ಆರೋಗ್ಯ ಕುರಿತು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ಮಾತನಾಡಿದರು.
ವಡಗೇರಾ:ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಬೆಳೆಗಳ ಸಮಗ್ರ ಬೆಳವಣಿಗೆ ಸಾಧ್ಯ ಬೆಳೆಗಳ ಸಂಪೂರ್ಣ ಬೆಳವಣಿಗೆಗೆ 16 ಪೋಷಕಾಂಶಗಳು ಅಗತ್ಯವಾಗಿದ್ದು. ಇವುಗಳಲ್ಲಿ ಬಹುಪಾಲು ಮಣ್ಣಿನಿಂದ ದೊರೆಯುತ್ತವೆ. ಆದ್ದರಿಂದ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಅವುಗಳ ಬಗ್ಗೆ ನಾವು ಅರಿತುಕೊಳ್ಳಬೇಕು ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ಹೇಳಿದರು.
ವಡಗೇರಾ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಗುರುವಾರ ಮಹತ್ವಾಕಾಂಕ್ಷಿ ತಾಲೂಕಿನ ಸಂಪೂರ್ಣತಾ ಅಭಿಯಾನ ಅಂಗವಾಗಿ ಕೃಷಿ ಇಲಾಖೆ ಯಾದಗಿರಿ ವತಿಯಿಂದ ಮಣ್ಣು ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣ್ಣು ರೈತರ ಕಣ್ಣು, ನಾವು ಸತ್ತರೆ ಮಣ್ಣಿಗೆ ಆದರೆ, ಮಣ್ಣು ಸತ್ತರೆ ನಾವು ಬದುಕುವುದಿಲ್ಲ ಆದರಿಂದ ಕನಿಷ್ಠ 3 ವರ್ಷಕ್ಕೆ ಒಂದು ಬಾರಿಯಾದರೂ ರೈತರು ಮಣ್ಣು ಪರೀಕ್ಷೆ ಮಾಡಿಸಿ ವೈಜ್ಞಾನಿಕ ಕೃಷಿ ಮಾಡಿದರೆ ಖರ್ಚು ಕಡಿಮೆಯಾಗಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.
ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿಸುವ ಮೂಲಕ ಮಣ್ಣಿನ ಗುಣ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಜಮೀನಿನಲ್ಲಿಯ ಪೋಷಕಾಂಶಗಳ ಗುಣ ಮಟ್ಟ ತಿಳಿದು, ಇದರ ಆಧಾರದ ಮೇಲೆ ಪ್ರತಿ ಎಕರೆಗೆ ವಿವಿಧ ಬೆಳೆಗಳಿಗೆ ಒದಗಿಸಬೇಕಾದ ರಸಗೊಬ್ಬರ ಪ್ರಮಾಣ ನಿಗದಿಪಡಿಸಲು ಸಹಾಯಕವಾಗುತ್ತದೆ ಎಂದರು.
ಮಣ್ಣು ಪರೀಕ್ಷೆಯ ನಂತರವಷ್ಟೇ ಯಾವ ರೀತಿ ಗೊಬ್ಬರ ಬಳಕೆ ಮಾಡಬೇಕೆಂದು ತಿಳಿಯುತ್ತದೆ. ಇದರಿಂದಾಗಿ ಯಾವ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದು ಕಂಡು ಕೊಳ್ಳಬಹುದಾಗಿದೆ. ಆದ್ದರಿಂದ ಎಲ್ಲ ರೈತರು ತಮ್ಮ ಜಮೀನಿನ ಮಣ್ಣುಪರೀಕ್ಷೆ ಮತ್ತು ಮಣ್ಣು ಆರೋಗ್ಯದತ್ತ ಕಾಳಜಿ ವಹಿಸಬೇಕು ಎಂದು ವಿವರಿಸಿದರು.ಕಾಂಗ್ರೆಸ್ ಮುಖಂಡ ಡಾ.ಭೀಮಣ್ಣ ಮೇಟಿ ಮಾತನಾಡಿ, ಗ್ರಾಮದ ಯುವಕರು ನಗರಗಳಿಗೆ ಹೋಗದೆ ಕೃಷಿ ಜ್ಞಾನ ಪಡೆದು ಲಾಭ ಪಡೆಯಬಹುದು ಮತ್ತು ಉತ್ತಮ ಆರೋಗ್ಯಕರ ಜೀವನ ನಡೆಸಲು ರೈತರಿಗೆ ಯುವಕರಿಗೆ ತಿಳಿಸಿದರು.
ವ್ಯವಸಾಯವನ್ನು ನೆಚ್ಚಿಕೊಂಡಿರುವ ಕೃಷಿಕರಿಗೆ ಅವರ ಜಮೀನೇ ಅವರ ಬದುಕು. ಆದ್ದರಿಂದ ಈ ದಿಸೆಯಲ್ಲಿ ಭೂಮಿಯಲ್ಲಿನ ಮಣ್ಣಿನ ಫಲವತ್ತತೆ ಹಾಳಾಗದಂತೆ ವಿಶೇಷ ಗಮನ ಹರಿಸುವುದು ಪ್ರತಿಯೊಬ್ಬ ರೈತರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ದೇವಿಂದ್ರಪ್ಪ ಮುನಮುಟಗಿ, ಜೇಜಪ್ಪ ಕಾವಲಿ, ಮತ್ತು ಗ್ರಾಮದ ರೈತರು ಇನ್ನಿತರರಿದ್ದರು.
ವರದಿ:ಶಿವರಾಜ ಸಾಹುಕಾರ ವಡಗೇರಾ