ಕಲಬುರಗಿ/ಜೇವರ್ಗಿ:
78 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಭೋಸಗಾ (ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ತ್ರಿವರ್ಣ ಧ್ವಜಾರೋಹಣದ ಮುಖಾಂತರ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಜನರಲ್ಲಿ ಸ್ವತಂತ್ರದ ದಿನದ ಅರಿವು ಮೂಡಿಸಲು ಶಿಕ್ಷಕರ ಮಾರ್ಗದರ್ಶನದಲ್ಲಿ ಊರಲ್ಲಿ ಪರೇಡ್ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಭೀಮಾಶಂಕರ ಬಿರಾದಾರ, ಸ್ವತಂತ್ರ ದಿನದ ಪ್ರಾಮುಖ್ಯತೆ, ಹಿರಿಯರು ಮಾಡಿದ ತ್ಯಾಗ ಬಲಿದಾನಗಳು ಮತ್ತು ಅವರ ಹೋರಾಟದ ಬದುಕಿನ ಮೇಲೆ ಬೆಳಕು ಚೆಲ್ಲಿದರು.
ಮಹಾತ್ಮ ಗಾಂಧೀಜಿ, ಅಂಬೇಡ್ಕರ ರವರು ಆಚರಿಸಿದ ಆದರ್ಶದ ಬದುಕಿನ ಮೂಲಕ ಅವರು ಕಂಡ ಕನಸಿನ ಸಮಾಜ ನಿರ್ಮಾಣ ಸಾಕಾರವಾಗಲು ಶಿಕ್ಷಣ ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಮತ್ತು ಹಳ್ಳಿಗಳು ಶಿಕ್ಷಣದ ಮೂಲಕ ಒಂದು ದೇಶದ ಸದೃಢ ಅಭಿವೃದ್ಧಿಯಲ್ಲಿ ಭಾಗಿಯಾಗುವ ಅಗತ್ಯತೆ ಬಗ್ಗೆ ಹೇಳಿದರು.
ಮುಂದುವರೆದು ಪ್ರಸ್ತುತ ಸಾಮಾಜಿಕ ಸ್ಥಿತಿ-ಗತಿಯಲ್ಲಿ ಪ್ರತಿಯೊಂದು ಮಗುವಿನ ಕೌಶಲ್ಯ ಅಭಿವೃದ್ಧಿಯಲ್ಲಿ ಪಾಲಕ-ಪೋಷಕರ ಪಾತ್ರದ ಬಗ್ಗೆಯೂ ಜನರು ಮನ ಮುಟ್ಟುವ ಹಾಗೆ ತಿಳಿಸಿದರು.
ನಂತರ ವಿದ್ಯಾರ್ಥಿಗಳು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ, ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಅಲ್ಲಾಭಕ್ಷ ಅವರ ಮುಖಂಡತ್ವದಲ್ಲಿ ಹೊಸದಾಗಿ ಆಯ್ಕೆಯಾದ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಶಾಲೆಯ ಹಿರಿಯ ಶಿಕ್ಷಕರಾದ ಭೀಮರಾಯ ಅವರಾದಿ ರವರ ವರ್ಗಾವಣೆ ನಿಮಿತ್ಯ ಅವರನ್ನು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ದತ್ತು ತಳವಾರ್, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಅಮ್ಮಣಗೌಡ ಪಾಟೀಲ, ರಾಮಲಿಂಗ ಬಿರಾದಾರ, ಲಕ್ಷ್ಮಣ ಜಾಗಿರ್ದರ, ದಾದ ಪಟೇಲ್ ಗುಳ್ಯಳ, ಶರಣು ಜಾಗಿರ್ದರ್, ಅಣ್ಣಾರಾಯ ಭೋವಿ ಮತ್ತು ಊರಿನ ಜನರು ಭಾಗವಹಿಸಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)