ಮೈಸೂರು:ಮಹಾಕಾವ್ಯಗಳು ಸಮಾಜದ ದಾರಿದೀಪಗಳು.ಸ್ವಾರ್ಥ,ಅಶಾಂತಿ,ಅನ್ಯಾಯ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಮಹಾಪುರುಷರ ಆದರ್ಶಗಳ ಅನುಸರಣೆಯೇ ಸಮಾಜದ ಉಳಿವಿಗೆ ಅನಿವಾರ್ಯವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಮೈಸೂರಿನ ಚಾಮುಂಡಿ ಪುರಂನ ಶಿವಾನಂದ ಜ್ಞಾನಾಲಯದಲ್ಲಿ ಮಹಾಕವಿ ಗಜಾನನ ಹೆಗ್ಡೆ ಹಾಗೂ ಪದ್ಮಿನಿ ಹೆಗಡೆ ದಂಪತಿಗಳು ಏರ್ಪಡಿಸಿದ್ದ ದಿವಾಕರ ಹೆಗಡೆ ಅವರ ಮಹರ್ಷಿ ವ್ಯಾಸ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಪ್ರಸಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಾಚೀನ ಭಾರತದ ಮಹಾನ್ ಸಾಧಕರೇ ಸಮಾಜದ ಬೆನ್ನೆಲುಬು.ವ್ಯಾಸ ಮಹರ್ಷಿಯ ಆಂತರಿಕ ತುಮುಲಗಳನ್ನು ನಿವೃತ್ತ ಆಕಾಶವಾಣಿ ಅಧಿಕಾರಿಗಳು,ಹಿರಿಯ ಯಕ್ಷಗಾನ ಚಿಂತಕರೂ ಅದ ದಿವಾಕರ ಹೆಗ್ಡೆ ಅವರು ಬಹಳ ಉತ್ತಮವಾಗಿ, ಮನಸೆಳೆಯುವಂತೆ ರೂಪಿಸಿದ್ದಾರೆ.ರಾಜ್ಯ ಯಕ್ಷಗಾನ ಅಕಾಡೆಮಿಯು ಈ ಬಗ್ಗೆ ಗಮನ ಹರಿಸಬೇಕು.ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಯುವ ಜನರಲ್ಲಿ ರೂಡಿಸಲು ಇಂತಹ ಕಾರ್ಯಕ್ರಮಗಳನ್ನು ಶಾಲಾಕಾಲೇಜುಗಳ ಹಂತದಲ್ಲಿ ನಡೆಸಬೇಕು ಎಂದವರು ಅಭಿಪ್ರಾಯಪಟ್ಟರು.
ಹಿರಿಯ ಚಿಂತಕ ರಾಮಶೇಷು ಅವರು ಮಾತನಾಡಿ ವ್ಯಾಸ ಭಾರತದ ಹಲವು ಮಜಲುಗಳನ್ನು ರಚಿಸುವಾಗ ವ್ಯಾಸ ಮಹರ್ಷಿಯ ಮನಸಿನಲ್ಲಿ ನಡೆದಿರಬಹುದಾದ ಆಂತರಿಕ ತುಮುಲಗಳನ್ನು ದಿವಾಕರ್ ಹೆಗ್ಡೆ ಅವರು ತಮ್ಮ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಕಾರ್ಯಕ್ರಮದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.ಅದರ ಜೊತೆಜೊತೆಗೇ ಸಮಾಜದ ಅಭ್ಯುದಯಕ್ಕೆ ಸಹಾಯಕವಾಗುವ ಚಿಂತನೆಗಳನ್ನು ನೀಡಿದ್ದಾರೆ.ಇದೊಂದು ಯಶಸ್ವೀ ಕಾರ್ಯಕ್ರಮ ಎಂದು ನುಡಿದರು.
ಮಹಾಕವಿ ಗಜಾನನ ಈಶ್ವರ ಹೆಗ್ಗಡೆ ಹಾಗೂ ಸಾಹಿತಿ ಶ್ರೀಮತಿ ಪದ್ಮಿನಿ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿವಾಕರ ಹೆಗ್ಡೆ ವ್ಯಾಸ ಮಹಾಕವಿಯ ಏಕವ್ಯಕ್ತಿ ಚಂಡಮದ್ದಳೆ ಕಾರ್ಯಕ್ರಮ ಸುಂದರವಾಗಿ ನಿರೂಪಿಸಿದರು. ಅನಂತ ಹೆಗ್ಡೆ ಭಾಗವತರು ಹಾಗೂ ಅನಂತ್ ಪದ್ಮನಾಭ ಸಹಕಾರ ನೀಡಿದರು.
ಮೈಸೂರಿನಲ್ಲಿ ಅಪರೂಪವಾದ ವಿಶೇಷವಾದ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಪ್ರಸಂಗವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಸಾಹಿತ್ಯ ಪ್ರೇಮಿಗಳ ಮನ ಸೆಳೆಯಿತು.