ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ-ಅರಿವನ್ನು ತೀವ್ರಗೊಳಿಸಲು ಡಿಸಿ ಸೂಚನೆ

ಶಿವಮೊಗ್ಗ:ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ವಿರುದ್ದ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸಬೇಕು ಹಾಗೂ ಅರಿವನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್ ಮಾಹೆಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ 43 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ 19 ಮತ್ತು ಭದ್ರಾವತಿ 12 ಸಂಖ್ಯೆಯಲ್ಲಿದ್ದು ಈ ಎರಡು ತಾಲ್ಲೂಕುಗಳಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳಿವೆ. ಹೆಚ್ಚಿನ ಪ್ರಕರಣ ದಾಖಲಾಗಿರುವೆಡೆ ಸಮುದಾಯದಲ್ಲಿ ಸೇವೆ ಸಲ್ಲಿಸಿರುವ ಮುಖಂಡರ ಮುಂದಾಳತ್ವದಲ್ಲಿ, ಅವರನ್ನೊಳಗೊಂಡು ಆ ಪ್ರದೇಶದಲ್ಲಿ ಪರಿಣಾಮಕಾರಿ ಅರಿವು ಕಾರ್ಯಕ್ರಮ ಕೈಗೊಳ್ಳಬೇಕು ಹಾಗೂ ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಾಗೂ 2022-23 ನೇ ಸಾಲಿನಲ್ಲಿ ಒಟ್ಟು 247 ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಯಲು ಸಿಡಿಪಿಓ ಗಳು ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡುವುದರೊಂದಿಗೆ ಪೋಷಕರಿಗೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ನೇಮಕಾತಿ, ಪದೋನ್ನತಿ ಮತ್ತು ವರ್ಗಾವಣೆಗೆ ಸಂಬಸಿಧಿಸಿದ ವರ್ಗಾವಣೆ ಮತ್ತು ಪದೋನ್ನತಿಯ ಪ್ರಕ್ರಿಯೆಯನ್ನು ಮೊದಲ ಆದ್ಯತೆಯಲ್ಲಿ ಮುಗಿಸಿ ನಂತರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ 126 ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಕಾರಿಗಳು ನೇಮಕಾತಿ ವೇಳೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೇ, ಪಾರದರ್ಶಕವಾಗಿ ಮತ್ತು ಎಚ್ಚರಿಕೆಯಿಂದ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 2563 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2103 ಗ್ರಾಮೀಣ ಭಾಗದಲ್ಲಿ ಮತ್ತು 460 ನಗರ ಭಾಗದಲ್ಲಿವೆ. 471 ಅಂಗನವಾಡಿಗಳಿಗೆ ನಿವೇಶನದ ಅಗತ್ಯವಿದ್ದು, ಶೀಘ್ರದಲ್ಲೇ ಬಿಇಓ ಒಳಗೊಂಡ ಕಾರ್ಯಪಡೆ ರಚಿಸಿ ಜಾಗ ಹುಡುಕಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಸಿಎ ನಿವೇಶನಗಳನ್ನು ನೋಡಿ, ಜಾಗವನ್ನು ಒದಗಿಸಲಾಗುವುದು ಎಂದರು.
ಪ್ರತಿ ವರ್ಷ ಅಂಗನವಾಡಿ ಕೇಂದ್ರಗಳ ತಕ್ಕಡಿಗಳ ತೂಕ ಮತ್ತು ಅಳತೆಯನ್ನು ಕಾನೂನು ಮಾಪನ ಶಾಷ್ರ್ ಇಲಾಖೆಯಿಂದ ಸತ್ಯಾಪನೆ ಮತ್ತು ದುರಸ್ತಿ ಮಾಡಿಸುವ ಅವಶ್ಯಕತೆ ಇರುತ್ತದೆ. ಆದರೆ ಸದರಿ ಇಲಾಖೆಯವರು ಸಂಪೂರ್ಣ ರಿಪೇರಿ ಅಗತ್ಯವಿದೆ ಎಂದು ತಿಳಿಸಿರುತ್ತಾರೆ ಹಾಗೂ ಅದರ ಶುಲ್ಕವೇ ಹೆಚ್ಚಿರುವ ಕಾರಣ ಈ ಕುರಿತು ಪರಿಶೀಲಿಸಿ ಇನ್ನು 15 ದಿನಗಳ ಒಳಗಾಗಿ ತೂಕದ ಸಾಧನಗಳ ಸತ್ಯಾಪನೆ ಮತ್ತು ದುರಸ್ತಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬ೦ಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಅನಧಿಕೃತ ಸ್ಪಾ ಗಳ ವಿರುದ್ದ ಕ್ರಮ : ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಪಾ ಗಳ ಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ವೇಶ್ಯಾವಾಟಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಪಾಗಳು ಪಾಲಿಕೆ ಮತ್ತು ಎಸ್‌ಪಿ ಕಚೇರಿಯಿಂದ ಪರವಾನಗಿ ಮತ್ತು ಅನುಮತಿ ಪಡೆಯಬೇಕು. ಪರವಾನಗಿ ಪಡೆಯದೇ ಹಾಗೂ ನಿಯಮಗಳನ್ನು ಅನುಸರಿಸದೇ ಅನಧಿಕೃತವಾಗಿ ನಡೆಸುತ್ತಿರುವ ಸ್ಪಾಗಳ ಮೇಲೆ ದಾಳಿ ನಡೆಸಿ, ಮುಚ್ಚಲು ಕ್ರಮ ವಹಿಸಲಾಗುವುದು. ದಾಳಿ ವೇಳೆ ಸಿಡಿಪಿಓ ಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಸಹ ಹಾಜರಾಗಬೇಕು. ಹಾಗೂ ನಿಯಮಿತವಾಗಿ ಸ್ಪಾಗಳ ಚಟುವಟಿಕೆ ಬಗ್ಗೆ ಪರಿಶೀಲಿಸುತ್ತಿರುಬೇಕು ಎಂದು ತಿಳಿಸಿದ ಅವರು ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಅರಿವು ಕಾರ್ಯಗಳನ್ನು ಕೈಗೊಳ್ಳಬೇಕು ಹಾಗೂ ಪೋಷಕರು, ಮುಖಂಡರ ಮುಂದಾಳತ್ವದಲ್ಲಿ ಜಾಗೃತಿ ಮೂಡಿಸಬೇಕೆಂದರು.
ಕೌಟುಂಬಿಕ ಹಿಂಸೆಯಿ೦ದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ನ್ಯಾಯಾಲಯಕ್ಕೆ ಸಲ್ಲಿಸುವ ಡಿಐಆರ್‌ಗಳಿಗೆ ನ್ಯಾಯಾಲಯಗಳಿಂದ ಮಧ್ಯಂತರ ಆದೇಶ ಮತ್ತು ಆದೇಶ ನೀಡುವುದು ವಿಳಂಬವಾಗುತ್ತಿದ್ದು ಸಂರಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ನ್ಯಾಯವಾದಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಮಧ್ಯಂತರ ಆದೇಶದ ನೀಡುವ ಕುರಿತು ನ್ಯಾಯಾಲಯ ಸೂಕ್ತ ಕ್ರಮ ವಹಿಸಬೇಕೆಂದು ಕೋರಿದರು.
2022 ರಿಂದ 2024 ರವರೆಗೆ ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ 249 ಪ್ರಕರಣ ದಾಖಲಾಗಿದ್ದು ವಿಚಾರಣೆ, ತನಿಖೆ ಹಂತದಲ್ಲಿ ಪ್ರಕರಣಗಳು ಇವೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನಲ್ಲೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸಿಡಿಪಿಓ ಇತರೆ ಅಧಿಕಾರಿಗಳ ಸಹಯೋಗದೊಂದಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಮಹಿಳಾ ಗ್ರಾಮಸಭೆಗಳು, ಸ್ತ್ರೀ ಶಕ್ತಿ ಗುಂಪುಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಟ್ರಾನ್ಸ್ ಜೆಂಡರ್, ಲೈಂಗಿಕ ಕಾರ್ಯಕರ್ತರು, ಹೆಚ್‌ಐವಿ ಪೀಡಿತರಿಗೆ ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆಗಳನ್ನು ಒದಗಿಸುವಂತೆ ಹಾಗೂ ಮಹಿಳಾ ನಿಲಯದ ದುರಸ್ತಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬಿಡುಗಡೆಗೆ ಕ್ರಮ ವಹಿಸುವಂತೆ ಕೋರಿದರು.
ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೊಷ್ ಕುಮಾರ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕರಾದ ನಂದಿನಿ,ಡಿಹೆಚ್‌ಓ ಡಾ.ನಾಗರಾಜ್, ಡಿಡಿಪಿಯು ಪರಮೇಶ್ವರಪ್ಪ, ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ತಾಲ್ಲೂಕುಗಳ ಸಿಡಿಪಿಓ ಗಳು, ವಿವಿಧ ಕಾರ್ಯಕ್ರಮಗಳ ಅನುಷ್ಟಾನ ಅಧಿಕಾರಿಗಳು,ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ