ಪಾವಗಡ :ಮದುವೆ ಮನೆಯಲ್ಲಿ ಊಟ ಸೇವಿಸಿ ಅಸ್ವಸ್ಥಗೊಂಡವರಿಗೆ ತಾಲೂಕು ಆರೋಗ್ಯ ಇಲಾಖೆಯಿಂದ ನಾಗೇನಹಳ್ಳಿ ತಾಂಡಾದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಪಾಠಶಾಲೆಯಲ್ಲಿ ತೆರೆದಿರುವ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ವರದರಾಜು, ತಾಪಂ ಇಒ ಜಾನಕೀರಾಮ್, ಡಾ.ಕಿರಣ್ ಪರಿಶೀಲಿಸಿದರು.
ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ
ಪಾವಗಡ: ಮದುವೆ ಮನೆಯಲ್ಲಿ ಊಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದವರಿಗೆ ಹಾಗೂ ಹೊಸದಾಗಿ ದಾಖಲಾಗುವವರಿಗಾಗಿ ತಾಲೂಕು ಆರೋಗ್ಯ ಇಲಾಖೆಯಿಂದ ನಾಗೇನಹಳ್ಳಿ ತಾಂಡಾದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಪಾಠಶಾಲೆಯಲ್ಲಿ ತೆರೆದು, ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ. ಮಂಗಳವಾರ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಆದರೆ ಒಪಿಡಿಗೆ 10-15 ಜನ ಬಂದು ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಮಲವನ್ನು ಪರೀಕ್ಷೆಗೆಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಡಾಕ್ಟರ್ ಸೇರಿ ನಾಲ್ವರು ಸಿಬ್ಬಂದಿ ನಿಯೋಜನೆ ಹಾಗೂ ಅಂಬುಲೆನ್ಸ್ ಸೇವೆ ಕಲ್ಪಿಸಲಾಗಿದೆ ಆಶಾ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ಮಾಡಿಸಲಾಗುತ್ತಿದೆ.
ತಿಳಿಯದ ಕಾರಣ:
ಶುಕ್ರವಾರದಿಂದ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಪಾವಗಡದ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸೇರಿ ತುಮಕೂರು, ಬೆಂಗಳೂರು ಮತ್ತು ಆಂಧ್ರದ ಹಿಂದೂಪುರಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗೇನಹಳ್ಳಿ ತಾಂಡಾ ಮತ್ತು ಶ್ರೀರಂಗಪುರ ತಾಂಡಾದಲ್ಲಿ ಘಟನೆ ನಡೆದು ನಾಲೈದು ದಿನಗಳು ಕಳೆದರೂ ವಾಂತಿಭೇದಿ ಯಾವ ಕಾರಣಕ್ಕೆ ಆಗುತ್ತಿದೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ತಾಪಂ ಇಒ ಜಾನಕೀರಾಮ್, ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್, ಕುಡಿಯುವ ನೀರು ಮತ್ತು ರ್ನೈಮಲ್ಯ ಇಲಾಖೆ ಅಧಿಕಾರಿ ಹನುಮಂತಪ್ಪ, ಬಸವಲಿಂಗಪ್ಪ, ಸುರೇಶ್ ಮತ್ತು ಪಿಡಿಒ ಸುದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವರದಿ.ಕೆ.ಮಾರುತಿ ಮುರಳಿ