ಲಿಂಗಸುಗೂರು:ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಲಿಂಗಸುಗೂರು ಘಟಕದ ನೇತೃತ್ವದಲ್ಲಿ ಕೊಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ವಿದ್ಯಾರ್ಥಿನಿಯ ಮೇಲೆ ನಡೆದ ಬರ್ಬರ ಅತ್ಯಾಚಾರ, ಕೊಲೆ ಹಾಗು ಹೋರಾಟಗಾರರ ಮೇಲಿನ ದಾಳಿಯನ್ನು ಖಂಡಿಸಿ ಇಂದು ಲಿಂಗಸೂಗೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಅವರು ಆಗಸ್ಟ್ 8 ರಂದು ಮಧ್ಯರಾತ್ರಿ ಸತತ 36 ತಾಸುಗಳ ತನ್ನ ಕೆಲಸವನ್ನು ನಿರ್ವಹಿಸಿ ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್ ಗೆ ತೆರಳಿದ ವಿದ್ಯಾರ್ಥಿನಿಯು ಬೆಳಗಾಗುವಷ್ಟರಲ್ಲಿ ಹೆಣವಾಗಿ ದೊರೆತಿದ್ದಾಳೆ. ಇಂಥಹ ಪಾಶವಿ ಕೃತ್ಯವನ್ನು ಉಗ್ರವಾಗಿ ಖಂಡಿಸಬೇಕಾಗಿದೆ ಎಂದು ಹೇಳಿದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ ವೈದ್ಯರ ಮೇಲೆ ಗುಂಡಾಗಳು ದಾಳಿ ಮಾಡಿದ್ದಾರೆ. ಅಲ್ಲಿನ ರಾಜ್ಯ ಸರ್ಕಾರ ರಕ್ಷಣೆ ನೀಡುವುದು ಬಿಟ್ಟು ಗೂಂಡಾಗಿರಿ ಮಾಡುವವರ ಬೆಂಬಲಕ್ಕೆ ನಿಂತಿದೆ ಎಂದರು.
ಜನರ ಜೀವವನ್ನೇ ರಕ್ಷಿಸುವ ವೈದ್ಯರಿಗೆ ಆಸ್ಪತ್ರೆಯಲ್ಲಿ ರಕ್ಷಣೆ ಇಲ್ಲದಿರುವುದು ಅತ್ಯಂತ ನಾಚಿಕೆಗೇಡಿನ ಕೃತ್ಯವಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಯನ್ನು ನಾವು ಮತ್ತೆ ಮತ್ತೆ ಕೇಳುತ್ತೇವೆ. ಆದರೆ ಶಿಕ್ಷಿತ 31ವರ್ಷದ ಹೆಣ್ಣು ಮಗಳಿಗೂ,ನಾಲ್ಕು ವರ್ಷದ ಹೆಣ್ಣು ಮಗುವಿಗೂ,80 ವರ್ಷದ ವೃದ್ಧರಿಗೂ ನಮ್ಮ ದೇಶದಲ್ಲಿ ರಕ್ಷಣೆ ಇಲ್ಲದೆ ಇರುವುದು ಅತ್ಯಂತ ದುರಂತವಾಗಿದೆ. ಕೇವಲ ಘೋಷಣೆಗಳು ಘೋಷಣೆಗಳಾಗೇ ಇವೆ. ಇಂತಹ ಕೃತ್ಯಗಳ ವಿರುದ್ಧ ನಾಗರಿಕ ಸಮಾಜವು ಮುಂದೆ ಬಂದು ಧಿಕ್ಕಾರ ಹೇಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಹದಿನೈದು ನಿಮಿಷಕ್ಕೆ ಒಬ್ಬ ಹೆಣ್ಣು ಮಗಳ ಮೇಲೆ ಅತ್ಯಾಚಾರ ಜರುಗುತ್ತಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ ಎಂದರು. ಹೆಣ್ಣು ಮಕ್ಕಳು ನಾಪತ್ತೆಯಾಗುವುದು, ಅತ್ಯಾಚಾರ, ಕೊಲೆ, ದೌರ್ಜನ್ಯಗಳಿಗೆ ಒಳಗಾಗುತ್ತಿರುವುದು ಅತ್ಯಂತ ನೋವಿನ, ಸಂಕಟದ ವಿಷಯವಾಗಿದೆ. ಆದ್ದರಿಂದ ಸರ್ಕಾರಗಳು ಬರಿ ಬಾಯಿ ಮಾತಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಅವರ ನಿಜವಾದ ರಕ್ಷಕರಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಘಟನೆ ಕುರಿತು ಸೂಕ್ತ ನಿಷ್ಪಕ್ಷಪಾತ ತನಿಖೆ ಆಗಬೇಕು, ವೈದ್ಯೆ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆಯಾಗಬೇಕು ಹಾಗೂ ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸು ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ, ಬಾಲಾಜಿ, ಚಂದ್ರಶೇಖರ, ಸಾತ್ವಿಕ್, ಸಂದೀಪ್, ವಿನೋದ್, ಸುದೀಪ್, ಬಸವರಾಜ್, ಚಂದ್ರಶೇಖರ, ಭೂಮಿಕಾ, ಜನನಿ, ಲತಾ, ಸುಜಾತಾ, ಕಾವೇರಿ ಮುಂತಾದ ನೂರಾರು ವಿದ್ಯಾರ್ಥಿ-ಯುವಜನರು ಭಾಗವಹಿಸಿದ್ದರು.