ಶಿವಮೊಗ್ಗ :ಅಧರ್ಮ ತಲೆ ಎತ್ತಿದಾಗ, ಧರ್ಮ ರಕ್ಷಣೆಗಾಗಿ ಮತ್ತೆ ಅವತರಿಸುವ ಹಾಗೂ ಇಡೀ ಲೋಕಕ್ಕೆ ಮಾನ್ಯನಾದ ಶ್ರೀ ಕೃಷ್ಣನನ್ನು ನಮ್ಮಲ್ಲಿ ಜಾಗೃತಗೊಳಿಸಿಕೊಂಡು ನಡೆಯಬೇಕಿದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಜಗತ್ತಿಗೇ ಒಳ್ಳೆಯದು ಮಾಡಿದ ಶ್ರೀ ಕೃಷ್ಣನನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಇಷ್ಟಪಡುತ್ತಾರೆ, ಧರ್ಮ ಸ್ಥಾಪನೆ ಮತ್ತು ಸಮಾಜ ಸ್ವಾಸ್ಥ್ಯ ಕೃಷ್ಣನ ಗುರಿಯಾಗಿದ್ದು ಇದು ನಮ್ಮ ಜೀವನದ ಗುರಿಯಾಗಬೇಕು. ಶ್ರೀ ಕೃಷ್ಣ ಭಗವಾನ್ ನಮಗೆ ಮಾತ್ರ ಸೀಮಿತವಲ್ಲ, ಆತ ಸರ್ವವ್ಯಾಪಿ, ಸರ್ವಶ್ರೇಷ್ಠ. ಲೋಕ ಕಲ್ಯಾಣ ಮಾಡಿದ ಲೋಕಮಾನ್ಯ. ಅಧರ್ಮ ಅವನತಿಯಾಗಿ ಧರ್ಮ ಸ್ಥಾಪನೆ ಆಗಬೇಕು, ರಾಕ್ಷಸತನ ದೂರ ಆಗಬೇಕೆಂದು ಕಾರ್ಯ ಪ್ರವೃತ್ತರಾದವರು. ಮಹಾನ್ ಧರ್ಮ ಉಳೀಬೇಕು ಅಂದರೆ ನಮ್ಮೆದುರಿಗೆ ಯಾರಿದ್ದಾರೆಂಬುದನ್ನು ಸಹ ನೋಡಬಾರದು ಎನ್ನುತ್ತಾರೆ ಕೃಷ್ಣ.
ಅಧರ್ಮ ಸೃಷ್ಟಿಯಾದಾಗಲೆಲ್ಲಾ ನಾನು ಮತ್ತೆ ಅವತರಿಸಿ ಧರ್ಮ ಸ್ಥಾಪಿಸುತ್ತೇನೆ ಎಂದಿರುವ ಶ್ರೀ ಕೃಷ್ಣ, ಅರ್ಜುನರ ಅಗತ್ಯವಿದೆ ನಮ್ಮ ಸಮಾಜಕ್ಕೆ. ಇಡೀ ವಿಶ್ವಕ್ಕೇ ಕೃಷ್ಣನ ಅಗತ್ಯವಿದೆ. ನಾವೆಲ್ಲ ಅವರ ಮಾರ್ಗದಲ್ಲಿ ನಡೆಯಬೇಕು. ಹಾಗಾದಾಗ ಮಾತ್ರ ಅಧರ್ಮ ನಾಶವಾಗಿ, ಧರ್ಮ ಸ್ಥಾಪನೆ ಸಾಧ್ಯ. ಅಂತಹ ಶ್ರೀ ಕೃಷ್ಣನನ್ನು ನಮ್ಮಲ್ಲಿ ಜಾಗೃತಗೊಳಿಸಿಕೊಂಡು ನಡೆಯೋಣ ಎಂದು ಕರೆ ನೀಡಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಅಧರ್ಮ ನಾಶಪಡಿಸಿ, ಧರ್ಮ ಸ್ಥಾಪಿಸಿದವರು ಶ್ರೀ ಕೃಷ್ಣ. ಧರ್ಮದ ಪರವಾಗಿ ನಿಂತು ಸಮಾಜಕ್ಕೆ ಉತ್ತರ ನೀಡಿದರು ಅವರು. ಅವರ ಆದರ್ಶ ಗಳನ್ನು ಅಳವಡಿಸಿಕೊಂಡು ಮುಂದೆ ಸಾಗೋಣ ಎಂದ ಅವರು ಭಗವದ್ಗೀತೆ ಪಠಣ ಮಾಡಿದರೆ ನಮ್ಮ ಗೊಂದಲಗಳಿಗೆ ಉತ್ತರ ಸಿಗುತ್ತದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಮಾತನಾಡಿ, ಕೃಷ್ಣ ಎಂದರೆ ಸ್ನೇಹ, ಸಂತೋಷ ಎಲ್ಲ ಜನಾಂಗದಲ್ಲಿ ಮೂಡುತ್ತದೆ. ಅಂತಹ ಕೃಷ್ಣನ ನಡೆ- ನುಡಿಯನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದು ನುಡಿದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ರವಿಕುಮಾರ್ ಮಾತನಾಡಿ, ವಿಶ್ವ ಗುರು ಶ್ರೀ ಕೃಷ್ಣ. ಪಾಂಡವರು ಸೇರಿದಂತೆ ನಮ್ಮೆಲ್ಲರ ಮಾರ್ಗದರ್ಶಿಗಳು ಅವರು. ಸಮಾಜದ ಏಳ್ಗೆಗಾಗಿ ನಾವೆಲ್ಲ ಒಗ್ಗಟ್ಟಾಗಿ ಇರೋಣ ಎಂದು ಕರೆ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಮಾತನಾಡಿ, ವಿಶ್ವವ್ಯಾಪಿಯಾಗಿ ಪೂಜಿಸಲ್ಪಡುವವನು ಶ್ರೀ ಕೃಷ್ಣ. ಅವರ ಆದರ್ಶಗಳನ್ನು ನಾವೆಲ್ಲ ಅನುಸರಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳೋಣ ಎಂದ ಅವರು ರಾಜ್ಯ ಸರ್ಕಾರ ಬಡವರ, ಹಿಂದುಳಿದವರ ಆರ್ಥಿಕ ಸಬಲೀಕರಣಕ್ಕಾಗಿ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ಫಲಾನುಭವಿಗಳು ಈ ಯೋಜನೆಗಳ ಫಲವನ್ನು ಪಡೆಯಬೇಕೆಂದರು.
ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಹಾಲಿಂಗಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾವಿಷ್ಣುವಿನ 8ನೇ ಅವತಾರ ಶ್ರೀಕಷ್ಣ. ಇವರ ಹುಟ್ಟು ಲೋಕಕಲ್ಯಾಣಕ್ಕಾಗಿ ಆಗುತ್ತದೆ. ಸಜ್ಜನರ ರಕ್ಷಣೆ. ದುಷ್ಟರ ನಾಶಕ್ಕಾಗಿ ಕೃಷ್ಣನ ಜನ್ಮವಾಗುತ್ತದೆ. ಯಾವಾಗ ಧರ್ಮ ಅವನತಿಯಾಗುವುದೋ, ಅಧರ್ಮ ಉನ್ನತಿಯಾಗುವುದೋ, ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿ ಯುಗದಲ್ಲೂ ಅವತರಿಸುತ್ತೇನೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಕೃಷ್ಣನೊಬ್ಬ ಆಪತ್ಭಾಂಧವ ಎಂದ ಅವರು ಶ್ರೀ ಕೃಷ್ಣ ಚರಿತೆಯನ್ನು ಹಾಗೂ ಕನಕದಾಸರ ಹರಿಭಕ್ತಸಾರ, ಜಾನಪದದಲ್ಲಿ , ಗೊಲ್ಲರ ಹಾಡು, ಗೀತೆಗಳಲ್ಲಿ ಶ್ರೀ ಕೃಷ್ಣನನ್ನು ಸ್ಮರಿಸುವ ರೀತಿಯನ್ನು ಗೀತಗಾಯನ ಹಾಗೂ ಅರ್ಥ ವಿವರಣೆ ಮೂಲಕ ತಿಳಿಸುತ್ತಾರೆ. ಹಾಗೂ ಗೊಲ್ಲರು ಶೈಕ್ಷಣಿಕವಾಗಿ, ರಾಜಕೀಯವಾಗಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಹಾಗೂ ಸಂಘಟಿತರಾಗಬೇಕೆAದು ಹೇಳಿದರು.
ಜಿಲ್ಲಾ ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಕೆ.ಅಂಜನಪ್ಪ ಮಾತನಾಡಿ, ಸಮಾಜದವರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿ ಕಾರ್ಯಕ್ರಮಕ್ಕೆ ಸೇರಬೇಕು. ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೆ ಅಭಿನಂದನೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು. ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೃಷ್ಣ ಜಯಂತಿಯ ಶುಭಾಶಯ ಕೋರಿದರು. ತಾಲ್ಲೂಕು ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಎಸ್.ಹೆಚ್.ಜಗದೀಶ್, ವಿವಿಧ ಸಮುದಾಯಗಳ ಮುಖಂಡರು, ಅಧಿಕಾರಿಗಳು, ಹಾಜರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ