ಬೀದರ್ /ಬಸವಕಲ್ಯಾಣ: ನಗರ ವ್ಯಾಪ್ತಿಯಲ್ಲಿ ಕೆಲವರು ದುರುದ್ದೇಶದಿಂದ ಸಾರ್ವಜನಿಕರಿಗೆ ಮೋಸ ವಂಚನೆಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಕಾರಣ ಯಾವುದೇ ಆಸ್ತಿ ಜಾಗ ಖರೀದಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ನಗರಸಭೆ ಪೌರಾಯುಕ್ತ ರಾಜು ಡಿ ಬಣಕಾರ್ ಸೂಚಿಸಿದ್ದಾರೆ.
ಈ ಸುದ್ದಿ ಪ್ರಕಟಣೆ ಹೊರಡಿಸಿರುವ ಅವರು ಯಾವುದೇ ಆಸ್ತಿ ನಿವೇಶನ ಖರೀದಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರಿಗೆ ಸಂಪರ್ಕಿಸಬೇಕು. ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿನ ಲೇಔಟ್ ನಕ್ಷೆ ಮೂಲ ನಕ್ಷೆ ಆಗಿದಿಯೋ ಇಲ್ಲವೋ ಅಥವಾ ಅದನ್ನು ತಿದ್ದಿ ಬೇರೆಯದನ್ನು ಸೃಷ್ಟಿಸಲಾಗಿದೆಯೋ ಎಂದು ಧೃಢಪಡಿಸಿಕೊಳ್ಳಬೇಕು. ಕೆಲವರು ರಸ್ತೆಯ ಜಾಗ, ಸರ್ಕಾರಿ ಜಾಗ, ನಾಗರಿಕ ಸೌಲಭ್ಯ ಜಾಗ, ಉದ್ಯಾನವನ ಜಾಗಗಳನ್ನು ಆಧರಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ.
ಸಾರ್ವಜನಿಕರು ಕಾನೂನು ಬದ್ಧ ಅಸ್ತಿಗಳನ್ನು ಖರೀದಿಸಿಕೊಂಡು ಕೂಡಲೇ ನಗರಸಭೆ ಮತ್ತು ಸಂಬಂಧಪಟ್ಟ ಕಛೇರಿಗಳಲ್ಲಿ ಹಕ್ಕು ವರ್ಗಾವಣೆ/ಮ್ಯೂಟೇಷನ್ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಹೀಗೆ ಮಾಡಿಕೊಳ್ಳದೆ ಇರುವುದರಿಂದ ಪುನಃ ಅದೇ ಆಸ್ತಿ ಬೇರೊಬ್ಬರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅದಕ್ಕೆ ಸಾರ್ವಜನಿಕರು ಇಂತಹ ಮೋಸದ ಜಾಲಕ್ಕೆ ಬಲಿಯಾಗದೆ ನೇರವಾಗಿ ನಗರಸಭೆಯ ಅಧಿಕಾರಿ/ಸಿಬಂದಿಗಳನ್ನು ಭೇಟಿಯಾಗಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಈ ರೀತಿಯಾದರೆ ಸಾರ್ವಜನಿಕರಲ್ಲಿ ಹಾಗೂ ಸರ್ಕಾರಿ ಇಲಾಖೆಗಳ ಮಧ್ಯೆ ಯಾವುದೇ ರೀತಿಯ ಗೊಂದಲ ಸೃಷ್ಟಿಯಾಗುವುದಿಲ್ಲ ಮತ್ತು ತಾವು ಖರೀದಿಸಿದ ಆಸ್ತಿಯೂ ಕೂಡ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದರು.
ವರದಿ: ಸಂದೀಪ್ ಕುಮಾರ್