ಹಾವೇರಿ/ಶಿಗ್ಗಾವಿ: ರಾಷ್ಟ್ರೀಯ ಅಹಿಂದ ಸಂಘಟನೆಯು ಸಂಘಟನೆ ಬಲಗೊಳಿಸಲು ವಿಶೇಷ ಕಾಳಜಿ ವಹಿಸಿಕೊಂಡಿದ್ದು ಅಹಿಂದ ನಾಯಕ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಕ್ತಿ ತುಂಬಲು ಇದೇ ಅಕ್ಟೋಬರ್ ೩ ರಂದು ಶಿಗ್ಗಾವಿ ಮುಖಾಂತರ ಬೆಂಗಳೂರು ವಿಧಾನಸೌಧದವರೆಗೆ ಬೃಹತ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಸಲಹಾ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಮ್ಮ ನೇತೃತ್ವದಲ್ಲಿ ಶಿಗ್ಗಾವಿಯಿಂದ ಡಾ. ಬಿ.ಆರ್ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಹಿಂದ ನಾಯಕ ,ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಳಿವಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಅಹಿಂದ ಜನತೆಯ ರಕ್ಷಣೆಗಾಗಿ, ಸಂವಿಧಾನ ಪೀಠಿಕೆ ಜ್ಞಾಪಕ ಹಾಗೂ ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಇದರಲ್ಲಿ ಎಲ್ಲಾ ಅಹಿಂದ ವರ್ಗದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೋಮುವಾದಿ ಪಕ್ಷಗಳು ನಾನಾ ಷಡ್ಯಂತ್ರಗಳನ್ನು ಮಾಡಿ ಅವರಿಗೆ ತೊಂದರೆ ನೀಡುತ್ತಿದ್ದು ಅದರಲ್ಲೂ ವಿಶೇಷವಾಗಿ ಬಿಜೆಪಿ-ಜೆಡಿಎಸ್ ಪಕ್ಷಗಳ ಮಾತು ಕೇಳಿಕೊಂಡು ರಾಜ್ಯಪಾಲರು ಮನ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ಅಹಿಂದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಜಾಥಾಗೆ ಶಕ್ತಿ ನೀಡಬೇಕು. ಇದರಲ್ಲಿ ರಾಜ್ಯ ಸಲಹಾ ಸಮಿತಿಯ ರಾಜ್ಯಾಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ, ಗುರುನಗೌಡ ಪಾಟೀಲ್ ಸೇರಿದಂತೆ ಹಲವಾರು ಮುಖಂಡರ ನೇತೃತ್ವದಲ್ಲಿ ಸಿ.ಎಂ.ಸಿದ್ದರಾಮಯ್ಯನವರ ಪರವಾಗಿ ಹೋರಾಟವನ್ನು ಹಮ್ಮಿಕೊಂಡಿದ್ದೇವೆ.
ಈ ಹೋರಾಟಕ್ಕೆ ಸರ್ವ ಅಹಿಂದ ವರ್ಗದ ಮುಖಂಡರು ಅಭಿಮಾನಿಗಳು ಕೈಜೋಡಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಅಹಿಂದ ಜಿಲ್ಲಾ ಉಪಾಧ್ಯಕ್ಷ ಹಾಗೂ ಶಹರ ಘಟಕ ಅಧ್ಯಕ್ಷ ರಮಾಕಾಂತ ಸೆಂಡಗೆ,ರಾಜ್ಯ ಎಸ್.ಸಿ,ಎಸ್ ಟಿ ಘಟಕದ ಉಪಾಧ್ಯಕ್ಷ ಮಹೇಶಕುಮಾರ ತಳವಾರ, ರಾಜ್ಯ ಸಮಿತಿ ಕಾರ್ಯದರ್ಶಿ ವಿನಯ ಕುಮಾರ ಕೆ.ಎಂ, ಸುಬಾಸ್ ನಾವಳ್ಳಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿಗಾರ ಮಂಜುನಾಥ ಪಾಟೀಲ ,ಶಿಗ್ಗಾಂವ