ಕಲಬುರಗಿ: ಶೈಕ್ಷಣಿಕ ಸುಧಾರಣಾ ಸಮಿತಿಯ ನೇತೃತ್ವ ವಹಿಸಲು ಸಂಘ ಪರಿವಾರದ ಹಿನ್ನೆಲೆಯ ಗುರುರಾಜ ಕರಜಗಿ ಅವರನ್ನು ನೇಮಿಸಿರುವುದನ್ನು ದಲಿತ ಅಲ್ಪಸಂಖ್ಯಾತರ ಸೇನೆ ಕರ್ನಾಟಕ ಶೇಖ್ ತಾಜುದ್ದೀನ್ ಕಾರ್ಯದರ್ಶಿ ಖಂಡಿಸಿದ್ದಾರೆ.
ಸರ್ಕಾರದ ಇಂತಹ ನಡೆ ಪ್ರಸ್ತುತ ಆಡಳಿತ ಕಾಂಗ್ರೆಸ್ ಅಥವಾ ಬಿಜೆಪಿಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ ಎಂದು ತಾಜುದ್ದೀನ್ ವ್ಯಕ್ತಪಡಿಸಿದರು. ಶೈಕ್ಷಣಿಕ ಸುಧಾರಣಾ ಸಮಿತಿಯಂತಹ ಮಹತ್ವದ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಿಸುವಾಗ ಅವರ ಹಿನ್ನೆಲೆಯನ್ನು ಪರಿಗಣಿಸುವ ವಿವೇಚನೆ ಸರ್ಕಾರಕ್ಕೆ ಇಲ್ಲವೇ ಎಂದು ಪ್ರಶ್ನಿಸಿದರು. ಅಂತಹ ವ್ಯಕ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದವರ ಬಗ್ಗೆಯೂ ಜನರಲ್ಲಿ ಅನುಮಾನವಿದೆ.
ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಬದಲು ಅದರ ನಾಶಕ್ಕೆ ಅನುಕೂಲ ಮಾಡಿಕೊಡುವ ಸರ್ಕಾರದ ನಿರ್ಧಾರವನ್ನು ದಲಿತ ಅಲ್ಪಸಂಖ್ಯಾತರ ಸೇನೆ ತೀವ್ರವಾಗಿ ಖಂಡಿಸುತ್ತದೆ. ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕರ್ನಾಟಕದಲ್ಲಿ ಹಲವು ಅರ್ಹ ವ್ಯಕ್ತಿಗಳಿದ್ದರೂ ಆ ಸ್ಥಾನಕ್ಕೆ ಸಂಘಪರಿವಾರದ ಹಿನ್ನೆಲೆಯವರನ್ನು ನೇಮಿಸುವ ಉದ್ದೇಶ ಏಕೆ? ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದರು.
ವರದಿ ಮೊಹಮ್ಮದ್ ಅಲಿ