ಭಟ್ಕಳ : ಜುಲೈ 16 ರಂದು ಅಂಕೋಲಾ ತಾಲೂಕಿನಲ್ಲಿ ಸಂಭವಿಸಿದ ಶಿರೂರು ಗುಡ್ಡಕುಸಿತ ಅವಘಡದಲ್ಲಿ 11 ಮಂದಿ ನಾಪತ್ತೆಯಾಗಿದ್ದು ಅದರಲ್ಲಿ ಇಲ್ಲಿಯವರೆಗೂ 9 ಶವಗಳು ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಗೆ ಗೋವಾದಿಂದ ಬೃಹತ್ ಯಂತ್ರಗಳನ್ನು ಕರೆಸಿ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ನಾಪತ್ತೆಯಾದ ಸ್ಥಳೀಯ ಇಬ್ಬರು ನಾಮಧಾರಿ ಸಮಾಜದ ವ್ಯಕ್ತಿಗಳ ಶವ ಪತ್ತೆ ಮಾಡುವ ಮುನ್ನ ಸರ್ಕಾರ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇಂದು ಭಟ್ಕಳ ತಾಲೂಕಾ ನಾಮಧಾರಿ ಸಮಾಜ ತಾಲೂಕಿನ ಆಡಳಿತ ಸೌಧದಲ್ಲಿ ಜಮಾವಣೆಗೊಂಡು ತಹಶಿಲ್ಧಾರರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು. ನಂತರ ಭಟ್ಕಳ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ನಾಮಧಾರಿ ಯುವಕರು ಬೀದಿಗಿಳಿದು ಹೋರಾಟಕ್ಕೆ ಮುಂದಾದರೆ ಭಟ್ಕಳ ಭಟ್ಕಳವಾಗಿ ಉಳಿಯುವುದಿಲ್ಲ. ಕೇರಳದ ಯುವಕನ ಶವಪತ್ತೆಗಾಗಿ ಸರ್ಕಾರ ತೋರಿದ ಕಾಳಜಿಯನ್ನು ದುರಂತದಲ್ಲಿ ನಾಪತ್ತೆಯಾದ ಸ್ಥಳೀಯ ವ್ಯಕ್ತಿಗಳ ಶವ ಪತ್ತೆಗೆ ತೋರುತ್ತಿಲ್ಲ ಎಂದು ಹೇಳಿದರು.
ವರದಿ: ಸಂದೇಶ್ ನಾಯ್ಕ