ಮುಂಡಗೋಡ: ವಕ್ಫ್ ಬೋರ್ಡ್ ರಾಜ್ಯಾದ್ಯಂತ ರೈತರು ಸೇರಿದಂತೆ ಮಠ ಮಾನ್ಯಗಳಿಗೆ ನೀಡುತ್ತಿರುವ ನೋಟಿಸ್ ಹಾಗೂ ವಕ್ಫ್ ಕುರಿತು ರಾಜ್ಯಸರ್ಕಾರದ ನೀತಿಯನ್ನು ಖಂಡಿಸಿ ಸೋಮವಾರ ಬಿಜೆಪಿ ಮುಂಡಗೋಡ ಘಟಕ ಪ್ರತಿಭಟನಾ ಮೆರವಣಿಗೆ ಮಾಡಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೈತಿಕತೆ ಇಲ್ಲದ ಸರ್ಕಾರ ಇತ್ತೀಚಿಗೆ ರೈತರ ಜಮೀನನ್ನು ವಕ್ಫ್ ಆಸ್ತಿಯಾಗಿ ಮಾಡಲು ರಾತ್ರೋ ರಾತ್ರಿ ನೋಟಿಸ್ ಕೊಡುತ್ತಾ ಬಂದಿದೆ.ತಮಿಳುನಾಡಿನ 1200 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವೊಂದನ್ನು ವಕ್ಫ್ ವ್ಯಾಪ್ತಿಗೆ ಸೇರಿಸಲಾಗಿದೆ.ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರ ಆಸ್ತಿಯನ್ನು ಮಠ ಮಂದಿರಗಳ ಆಸ್ತಿಯನ್ನು ವಕ್ಫ್ ವ್ಯಾಪ್ತಿಗೆ ಸೇರಿಸಿರಬಹುದು ಆದರೆ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧ್ಯವಿಲ್ಲ, ಒಂದು ವೇಳೆ ಹಾಗೇನಾದರೂ ಮಾಡಿದರೆ ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ನಮ್ಮಲಿದೆ. ಯಾವುದೇ ರೀತಿಯ ಹೋರಾಟಕ್ಕೂ ಬಿಜೆಪಿ ಸಿದ್ಧವಿದೆ. ಮುಡ ಆಯ್ತು, ವಾಲ್ಮೀಕಿ ನಿಗಮ ಹಗರಣ ಆಯ್ತು ಈಗ ವಕ್ಫ್ ಮೂಲಕ ರಾಜ್ಯದಲ್ಲಿ ಹೊಸ ಡ್ರಾಮಾ ಶುರುವಾಗಿದೆ. ಸರ್ಕಾರ ಕೂಡಲೇ ಈ ಡ್ರಾಮಾ ಕಂಪನಿಯನ್ನು ಬಂದ್ ಮಾಡಬೇಕು , ರೈತರ ಹಿತ ಕಾಯುವ ಕೆಲಸ ಮಾಡಬೇಕು ಎಂದರು.
ವಕ್ಫ್ ಬೋರ್ಡ್ ನಿಂದ ರಾಜ್ಯದಲ್ಲಿ ಆಗುತ್ತಿರುವ ಗೊಂದಲಗಳು ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದೆ, ಸರ್ಕಾರ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ
ರಾಜ್ಯದ ಅನೇಕ ಆಸ್ತಿ ವ್ಯಾಜ್ಯಗಳು ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೊಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ.ರೈತರ ಹಿತದೃಷ್ಟಿ ಗಾಗಿ ಕ್ರಮ ಕೈಗೊಳ್ಳಬೇಕಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಅವರ ಪರವಾಗಿ ನಿಂತಿದೆ. ಇದೆ ರೀತಿ ಪಾಳಾದಲ್ಲಿ ಹಿಂದೂ ರುದ್ರಭೂಮಿ ಹಾಗೂ ಮುಂಡಗೋಡ ನಗರದಲ್ಲಿರುವ ಖಾದರಲಿಂಗ್ ಗುಡಿಯನ್ನು ವಕ್ಫ್ ವ್ಯಾಪ್ತಿಗೆ ಸೇರಿಸಲು ಪ್ರಯತ್ನ ನಡೆಸಿರುವುದು ಅಕ್ಷಮ್ಯ ಈಗಾಗಲೇ ಈ ಕುರಿತು ಹೋರಾಟ ನಡೆಯುತ್ತಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್ ಹೇಳಿದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್ ಟಿ ಪಾಟೀಲ್ ಅವರು ಮಾತನಾಡಿ ಸರ್ಕಾರ ವಕ್ಫ್ ಮೂಲಕ ರೈತರ ಭೂಮಿ ಕಣ್ಣು ಹಾಕಿದೆ ಸರ್ಕಾರ ರೈತರ ಉನ್ನತಿಗೆ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ರಾಜ್ಯ ಎಸ್ ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಸಂತೋಷ್ ತಳವಾರ, ಗುಡ್ಡಪ್ಪ ಕೆ ತಳವಾರ, ವಿಠಲ್ ಬಾಳಂಬಿಡ್, ಗುರುರಾಜ್ ಕಾಮತ್, ನಿಂಗಪ್ಪ, ಕಾಳಪ್ಪ ಬಡಿಗೇರ, ಹುಲಗಪ್ಪ ಭೋವಿವಡ್ಡರ,ಶ್ರೀಕಾಂತ್ ಸಾನು, ರಾಜೇಶ್ ರಾವ್, ಡಿ ಎಫ್ ಮಡ್ಲಿ, ಎನ್ ಎಂ ಬೆಣ್ಣಿ, ಕೆ ರಾಜ್ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು, ರೈತರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು. ಇದೇ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.