ಬೀದರ್/ಚಿಟಗುಪ್ಪ : ಹಳ್ಳಿಗಳು, ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗಿದರೆ ಭವ್ಯ ಭಾರತ ಎಲ್ಲಾ ರೀತಿಯಲ್ಲೂ ಸರ್ವಾಂಗೀಣ ಉನ್ನತಿ ಹೊಂದಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಹೇಳಿದರು.
ನಗರದ ಅಂಬಾಭವಾನಿ ದೇವಸ್ಥಾನದ ಸಮುದಾಯ ಭವನ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2.50 ಲಕ್ಷ ರೂ. ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು ಭಾರತ ದೇಶ ಹಳ್ಳಿಗಳಿಂದ ಕೂಡಿದ ದೇಶ, ಹಳ್ಳಿಗಳು ಎಲ್ಲಾ ರೀತಿಯ ಏಳಿಗೆಗೆ ಆದರೆ ದೇಶ ಉಜ್ವಲವಾಗಲಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವು ಅಭಿವೃದ್ಧಿಪಥ ಯೋಜನೆಗಳು ಹಾಕಿಕೊಂಡು ಗ್ರಾಮೀಣಾಭಿವೃದ್ಧಿಗಾಗಿ ದುಡಿಯುತ್ತಿದೆ. ವಿಶೇಷವಾಗಿ ನಗರದಲ್ಲಿರುವಂತಹ ಹಲವು ದೇವಸ್ಥಾನಗಳಿಗೆ ಅನುದಾನ ನೀಡುವ ಮೂಲಕ ಜನಸಾಮಾನ್ಯರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಜನಜಾಗೃತಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ಅನುದಾನ ಉಪಯೋಗಿಸಿಕೊಂಡು ಸಮುದಾಯ ಭವನ ಅಭಿವೃದ್ಧಿ ಹೊಂದಲಿದೆ. ಜನಪರ ಸೇವಾ ಕೈಂಕರ್ಯಗಳು ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸಗಳು ಶ್ಲಾಘನೀಯವಾದುದು ಎಂದರು.
ತಾಲೂಕು ಯೋಜನಾಧಿಕಾರಿ ಬಸವರಾಜ ರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಮಹಮ್ಮದ್ ಅಸ್ಲಾಂಮಿಯಾ, ಅನೀಲಕುಮಾರ ಸಿಂಧೆ, ಸಂಗಮೇಶ ಎನ್ ಜವಾದಿ ಸೇರಿದಂತೆ ಭವಾನಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.