ಚಾಮರಾಜನಗರ/ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಧಿಕಾರ ಸೂಕ್ತ ಕ್ರಮ ವಹಿಸಬೇಕು ಎಂದ ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಶೌಚಾಲಯ, ಯುಜಿಡಿ ಹಾಗೂ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ದಿನಗಳಲ್ಲಿ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ. ಆದರೆ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದೆ ಇರುವುದರ ಬಗ್ಗೆ ಹಲವಾರು ದೂರುಗಳು ಬರುತ್ತಿದೆ. ಸಂಬಂಧ ಪಟ್ಟವರು ತಿರುಪತಿ ತಿರುಮಲ ದೇವಸ್ಥಾನದ ಮಾದರಿಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಶೌಚಾಲಯವನ್ನು ಸ್ವಚ್ಛಗೊಳಿಸಬೇಕು ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡದೆ ಇದ್ದರೆ ಶೌಚಾಲಯದ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 27 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು ಮೊದಲು ಸ್ವಚ್ಛ ನೀರನ್ನು ಬಿಟ್ಟು ಪರಿಶೀಲನೆ ನಡೆಸಬೇಕು ಯಾವುದೇ ಸಮಸ್ಯೆಗಳು ಬಾರದಿದ್ದರೆ ನಂತರ ಚರಂಡಿಯ ನೀರಿನ ಸಂಪರ್ಕ ಕೊಡಬೇಕು ಎಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಪ್ರಾಧಿಕಾರದ ವ್ಯಾಪ್ತಿಯ ರಸ್ತೆಗಳು ಹಳ್ಳ ಗುಂಡಿಗಳಿಂದ ಕೂಡಿರುವುದರಿಂದ ಮಳೆಗಾಲದಲ್ಲಿ ಮಳೆಯ ನೀರು ನಿಂತು ಪಾದಚಾರಿಗಳು ಹಾಗೂ ಭಕ್ತಾದಿಗಳು ಸಂಚರಿಸಲು ತೊಂದರೆಯಾಗುತ್ತಿದೆ ಕೂಡಲೇ ಗುಂಡಿ ಮುಚ್ಚಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ನಂತರ ಜರುಗುವ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ನಿರ್ಮಾಣ ಮಾಡಿರುವ ಕಲ್ಯಾಣಿಗೆ ತನ್ನದೇ ಆದ ಇತಿಹಾಸವಿದೆ ಈ ಕಲ್ಯಾಣಿಗೆ ಯಾವುದೇ ರೀತಿಯ ಗಲೀಜು ನೀರು ಬಾರದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಲೋಕಪಯೋಗಿ ಇಲಾಖೆಯ ಎಇಇ ಚಿನ್ನಣ್ಣ,ಮಹೇಶ್, ಪ್ರಾಧಿಕಾರದ ಅಭಿಯಂತರ ಸೆಲ್ವ ಗಣಪತಿ, ಮುಖಂಡರಾದ ಡಿ,ಆರ್ ಮಾದೇಶ್ ,ಡಿಕೆ ರಾಜು , ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್