ಹೊರಗೆ ಮುಸುಕಿನ ಕಿರುನಗೆ ಬೀರುತ
ಒಳಗೊಳಗೆ ದ್ವೇಷ ಜಾಲವ ಹಣೆಯುತ
ಬಣ್ಣದ ಮಾತಲ್ಲೇ ವಂಚನೆ ಮಾಡುತ
ಬದುಕಿಹರು ಮೌನದ ಕತ್ತಿ ಮಸೆಯುತ.
ತಲೆಗಳ ಒಡೆದು ದೌರ್ಜನ್ಯದಿ ಮೆರೆದು
ಬಡವರ ಶ್ರಮದಲ್ಲಿ ಲಂಚವನ್ನು ಪಡೆದು
ಸ್ವಾರ್ಥದ ಮಧದಲಿ ಅಡ್ಡದಾರಿ ಹಿಡಿದು
ಬದುಕಿಹರು ಮಾನ ಮರ್ಯಾದೆ ತೊರೆದು.
ತಿಳಿಯ ಮನಸುಗಳಿಗೆ ಕೇಡನು ಬಯಸಿ
ನೊಂದು ಸೋತವರಿಗೆ ಭೀತಿಯ ಹುಟ್ಟಿಸಿ
ಹೆಜ್ಜೆ ಹೆಜ್ಜೆಗೂ ಮಾತುಗಳಲ್ಲಿ ನೋಯಿಸಿ
ಬದುಕಿಹರು ದುಷ್ಟತನವ ಮನದೊಳಿರಿಸಿ.
ದೇವರ ಹೆಸರಲ್ಲಿ ದೋಚುವ ಸಂತರು
ಶಿಕ್ಷಣ ನೆಪದಿ ಸುಲಿಗೆಯ ಖದೀಮರು
ನಾಡನು ಆಳುವ ಬುದ್ಧಿವಂತ ದಡ್ಡರು
ಬದುಕಿಹರು ಎರಡು ನಾಲಿಗೆ ಕಳ್ಳರು.
ಸೇವೆಯ ನೆಪದಲ್ಲಿ ಜೊತೆಯಲಿ ಕೂಡಿ
ಆಶ್ವಾಸನೆ ಹೆಸರಲ್ಲಿ ಓಟನ್ನು ಬಗ್ಗಿ ಬೇಡಿ
ನೆಮ್ಮದಿಯ ಗೂಡನ್ನು ಕಲ್ಮಶವ ಮಾಡಿ
ಬದುಕಿಹರು ಸಂಬಂಧಗಳ ದೂರದೂಡಿ.
ಸೋದರತ್ವದ ಪ್ರೀತಿ ವಾತ್ಸಲ್ಯ ಬಿಟ್ಟು ಕೊಟ್ಟು
ಮೂರಡಿ ಜಾಗಕ್ಕೆ ದಾಯಾದಿ ಜಗಳ ತಂದಿಟ್ಟು
ಬಾಂಧವ್ಯಗಳ ಕೀಲಿ ಕೈ ಕೋರ್ಟಲ್ಲಿ ಬಚ್ಚಿಟ್ಟು
ಬದುಕಿಹರು ದುರ್ಮಾರ್ಗದ ಹೆಜ್ಜೆಯನಿಟ್ಟು.
ಸಂಸ್ಕಾರ ಸಂಸ್ಕೃತಿಯ ಎಲ್ಲವ ಮರೆತು
ಆಡಂಬರದ ಬದುಕಿಗೆ ಮನವ ಸೋತು
ರಾಮ ರಾಜ್ಯದ ಕನಸ ಭೂಮಿಗೆ ಹೂತು
ಬದುಕಿಹರು ಒಣ ಪ್ರತಿಷ್ಠೆಯ ಜಂಭ ಕಲಿತು.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ:-9740199896.