ದಕ್ಷಿಣ ಕನ್ನಡ: ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆ “ರಾಜ್ಯದಲ್ಲೇ ಮೊದಲ ಸೇವಾ ಆಸ್ಪತ್ರೆ” ಎಂಬ ಹೆಗ್ಗಳಿಕೆ ಪಡೆದಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಪ್ರತಿನಿತ್ಯ ಸಹಸ್ರಾರು ರೋಗಿಗಳು ಗುಣಮಟ್ಟದ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಲಕ್ಷ ಲಕ್ಷ ರೋಗಿಗಳಿಗೆ ವೆನ್ಲಾಕ್ ಆಸ್ಪತ್ರೆಯು ವರದಾನವಾಗಿದೆ. ಸರ್ಕಾರ, ಎನ್.ಜಿ.ಓಗಳು, ಸಂಘ ಸಂಸ್ಥೆಗಳು, ದಾನಿಗಳ ನೆರವಿನಲ್ಲಿ ಇನ್ನಷ್ಟು ಸೇವೆಗಳು ಬೇಕಿದೆ.
ಪ್ರಸ್ತುತ ತೀರ್ಥಹಳ್ಳಿ, ಭದ್ರಾವತಿ ಸೇರಿ ಅನೇಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳನ್ನು ಉತ್ತಮ ಹಾಗೂ ಮಾದರಿ ಆಸ್ಪತ್ರೆಗಳನ್ನಾಗಿ ಮಾರ್ಪಾಡು ಮಾಡಿರುವ ಡಾ. ಶಿವಪ್ರಕಾಶ್ ಡಿ.ಎಸ್ ಅವರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾಗಿದ್ದು ಅನೇಕ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ.
ವೆಸ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡ : ಮೊದಲ ದಿನವೇ 7 ಶಸ್ತ್ರಚಿಕಿತ್ಸೆ
ಡಿಸೆಂಬರ್ 1 ರಿಂದ ಶಸ್ತ್ರಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭ :
ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡದಲ್ಲಿ ನ. 6ರಿಂದ ಶಸ್ತ್ರಚಿಕಿತ್ಸೆಗಳನ್ನು ಪ್ರಾರಂಭಿಸಲಾಗಿದ್ದು, ಮೊದಲ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ತಜ್ಞ ವೈದ್ಯ ಡಾ. ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿನವೇ ಡಾ. ಸುರೇಶ ಪೈ ತಂಡದವರಿಂದ ಫೋರಾಸಿಕ್ ಸರ್ಜರಿ ಮಾಡಲಾಯಿತು. ಡಾ. ಹೇಮಲತಾ ಹಾಗೂ ಡಾ. ವಿಶ್ವ ವಿಜೇತ ತಂಡವು ಐದು ಜನರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದರು. ಡಾ. ಅರ್ಜುನ್ ಶೆಟ್ಟಿ ತಂಡವು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಡಾ. ಸುರೇಶ್ ಭಟ್ ಅರವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲಾ ಶಸ್ತ್ರಚಿಕಿತ್ಸೆಗಳನ್ನೂ ಯಾವುದೇ ತೊಂದರೆ ಆಗದ ರೀತಿ ನೆರವೇರಿಸಿದ್ದಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನರ್ಸಿಂಗ್ ಅಧಿಕಾರಿಗಳಾದ ಶೈಲಾ, ಜೇಸಿಂತ, ಅಶ್ವಿನಿ, ರೇಷ್ಮಾ, ಅಲ್ಪನ ಮಿನೇಜಸ್ ಇದ್ದರು.
ಡಿ.1 ರಿಂದ ಶಸ್ತ್ರಚಿಕಿತ್ಸಾ ಹಾಗೂ ಮೂಳೆ ವಿಭಾಗದ ತಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭವಾಗಲಿದ್ದು, ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ವಾರ್ಡ್ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ವೆನ್ಲಾಕ್ ಆಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ತಿಳಿಸಿದ್ದಾರೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ