ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕನಕದಾಸರ ಮೌಲ್ಯಾಧಾರಿತ ಸಾಹಿತ್ಯ

ನಮ್ಮ ಕರುನಾಡಿನ ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಬಸವಾದಿ ಶರಣರು, ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು. ಇವರಲ್ಲಿ ಎದ್ದು ಕಾಣುವವರು ಕನಕದಾಸರು.
ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರೆಂದು ಕರೆಯಿಸಿಕೊಂಡವರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪತ್ರರಾಗಿ ಲೋಕ ಕಲ್ಯಾಣಕ್ಕಾಗಿ ದುಡಿದವರು.

ಅಂತೆಯೇ ಭಕ್ತ ಕನಕದಾಸರು ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಇವರು ಪ್ರಮುಖರಾಗಿದ್ದವರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಹೌದು, ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಗಳ ಮಗನಾಗಿ 1509ರಲ್ಲಿ
ಜನಿಸಿದರು. ತಂದೆ ತಾಯಿ ಪ್ರೀತಿಯ ಮಗನಾಗಿದರು. ಬಾಲ್ಯದ ಜೀವನ ಆನಂದದಿಂದ ಸಾಗಿಸಿ,ಬೆಳೆದು ದೊಡ್ಡವರಾದರು. ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು,
ಸತ್ಯದ ಹಾದಿಯಲ್ಲಿ ನಡೆಯುವಂತ ಪ್ರಯತ್ನ ಮಾಡಿರುತ್ತಾರೆ.
ಆ ಒಂದು ಸಮಯದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿ, ಜಾತ್ಯಾತೀತತೆಯ ಭಾವನೆ ಸರ್ವರಲ್ಲಿಯೂ ಮೂಡಿಸಲು ಪ್ರಯತ್ನಿಸಿದರು ಕನಕದಾಸರು ಎಂಬುದು ಕಾಣುತ್ತೇವೆ.

ಕನಕದಾಸರ ಕೀರ್ತನೆಗಳು:
ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಸೃಷ್ಟಿಕರ್ತನನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. ‘ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ ‘ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- ‘ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ’ ಎಂದು ಸಂತೋಷಪಟ್ಟಿದ್ದಾರೆ. ‘ಎಲ್ಲಿ ನೋಡಿದರಲ್ಲಿ ಸೃಷ್ಟಿಕರ್ತ’ ಎಂಬ ಅನುಭೂತಿಯಲ್ಲಿ ಸೃಷ್ಟಿಕರ್ತನನ್ನು ಕಂಡ ಬಳಿಕ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಎಂಬ ಧನ್ಯತಾಭಾವ. ‘ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ’ ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ ‘ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ ಎನ್ನುತ್ತಾರೆ ಕನಕದಾಸರು. ಇನ್ನು ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಮೌಖಿಕವಾಗಿವೆ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.ಅದೇ ರೀತಿ
ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಜನಕ್ಕೆ ಎಚ್ಚರಿಸುತ್ತಾರೆ.

ಕನಕದಾಸರ ಸಾಮಾಜಿಕ ಕಳಕಳಿಯ ಮೌಲ್ಯಾಧಾರಿತ
ಸಾಹಿತ್ಯ:
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಮೌಲ್ಯಾಧಾರಿತ ಸಾಹಿತ್ಯ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಹೀಗಿವೆ – ಮೋಹನ ತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತೆ,ಹರಿಭಕ್ತಿಸಾರ,ನೃಸಿಂಹಸ್ತವ ಕೃತಿಗಳು ನಾಡಿಗೆ ನೀಡಿದ್ದಾರೆ.ಹೀಗೆ ಕನಕರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ಚಟುವಟಿಕೆಗಳು ಮತ್ತು ಅಧ್ಯಯನಗಳು ಜನಪರ ಚಿಂತನೆಗಳಿಗೆ ಬೆಳಕಾಗಿವೆ. ಅವರು ಅನುಭವಿಸಿದ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ ಕನಕದಾಸರ ಕೀರ್ತನೆಗಳು ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ. ಅದೇ ರೀತಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ’ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಹಾಗೆಯೇ
‘ನಳಚರಿತೆ’ ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ. ‘ಮೋಹನತರಂಗಿಣಿ’ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯವಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ.
ಇನ್ನು ರಾಮಧಾನ್ಯಚರಿತ್ರೆಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಶ್ರೇಷ್ಠ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆಯಾಗಿದೆ. ಅಂತೆಯೇ
ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವುಗಳಲ್ಲದೆ ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಕಷ್ಟಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ನಾಡಿಗೆ ತೋರಿಸಿದ್ದಾರೆ. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಕಾಣಬಹುದಾಗಿದೆ. ಅಂದಹಾಗೆ ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು. ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು ಎನ್ನುವುದು ನಾವ್ಯಾರೂ ಮರೆಯಬಾರದು.

ಕನಕದಾಸರ ಸಾಮಾಜಿಕ ಮೌಲ್ಯ:
ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ.
ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ ಎಂದಿದ್ದಾರೆ. ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ. ಕನಕದಾಸರು ಸಮಾಜದ ಒಳಿತಿಗೆ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. ಸಮಾಜದಲ್ಲಿ ಸತ್ಯ, ಧರ್ಮಗಳು ಮಾಯವಾಗುತ್ತಿರುವುದನ್ನು ನೋಡಿ ಮರುಕ ಪಟ್ಟಿದ್ದಾರೆ.

ಧರ್ಮವಿಲ್ಲದ ಅರಸು ಮುರಿದಕಾಲಿನ ಹೊರಸು
ನಿರ್ಮಲವಿಲ್ಲದ ಮನಸು ಅದು ಕಜ್ಜಿ ತಿನಿಸು.
ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆ
ಉತ್ತಮರ ಜೀವನಕೆ ದಾರಿಯಿಲ್ಲ
ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ
ಅರ್ಥಸಂಪದರಾಗಿ ಅನುಭವಿಸುತಿಹರು ಎನ್ನುತ್ತಾರೆ.
ಅದೇ ರೀತಿ ಮತ್ತೊಂದರಲ್ಲಿ …

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ?
ಕುಲಕುಲ ಕುಲವೆನ್ನುತಿಹರೋ
ಕುಲವಾವುದು ಸತ್ಯ ಸುಜನರಿಗೆ

ಎಂದು ನಮ್ಮನ್ನೆಲ್ಲರನ್ನು ಎಚ್ಚರಿಸುತ್ತಾ…

ಮಾನವರು ಮೋಸದ ಜೀವನ, ಅನ್ಯಾಯದ ಜೀವನವನ್ನು ನಡೆಸುವುದು ಸರಿಯಲ್ಲ. ಸತ್ಯದ ಹಾದಿಯಲ್ಲಿ ಸಾಗುವಂತ ಕೆಲಸ ಮಾಡಿ, ಸರ್ವರಿಗೂ ಮಾದರಿಯಾಗುವ ಕಾಯಕ ಮಾಡಬೇಕೆಂದು ತಿಳಿಸಿದ್ದಾರೆ.
ಹಾಗೆಯೇ ಹುಟ್ಟಿದ ಕುಲ ಮುಖ್ಯವಲ್ಲ ಗುಣಮುಖ್ಯ. ಉತ್ತಮ ಗುಣಗಳಿದ್ದರೆ ದೇವರು ಅಂಥವರನ್ನು ಮೆಚ್ಚುತ್ತಾರೆ ಎಂಬುದನ್ನು ಅವರ ಸ್ವ ಅನುಭವದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಮಹಾಮಹಿಮರು ಕನಕದಾಸರು. ಅಂತೆಯೇ ಅದನ್ನು ಮಾರ್ಮಿಕವಾಗಿ ನಮ್ಮನ್ನು ಎಚ್ಚರಿಸಿದ್ದಾರೆ.
ಹೀಗೆ ತೊಂಬತ್ತು ವರ್ಷಗಳ ಕಾಲ ಸುದೀರ್ಘ ಸಾರ್ಥಕ ಜೀವನ ನಡೆಸಿದವರು ಕನಕದಾಸರು. ಅವರು ರಚಿಸಿದ ಕೀರ್ತನೆಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ್ಯ ರತ್ನಗಳಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ.

ಗೌರವ ನುಡಿ:
ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು ಕನಕದಾಸರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಭಕ್ತಿಪಂಥದ ಕನಕದಾಸರು. ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ.

-ಸಂಗಮೇಶ ಎನ್ ಜವಾದಿ. ಬರಹಗಾರರು, ಚಿಂತಕರು, ಹೋರಾಟಗಾರರು.
ಬೀದರ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ