ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಸುಮಾರು 20 ವರ್ಷಗಳಿಂದ ರಾಮದುರ್ಗದ ಜನತೆ ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹೋರಾಟದ ಭಾಗವಾಗಿ ರೈಲ್ವೆ ಇಲಾಖೆಯಿಂದ 2016-17 ರಿಂದ ಸರ್ವೇ ಕಾರ್ಯ ನಡೆದು 2019 ರಲ್ಲಿ ರೂ.1667 ಕೋಟಿ ಕ್ರೀಯಾ ಯೋಜನೆಯು ಆಗಿ ಕೆಲಸ ಪ್ರಾರಂಭವಾಗದೇ ಉಳಿದಿದೆ. ಆದರೆ ಈ ವರೆಗೂ ಕೆಲಸ ಏಕೆ ಪ್ರಾರಂಭವಾಗಲಿಲ್ಲ ಎಂಬುದು ನಿಗೂಢವಾಗಿದೆ.
ಆದ್ದರಿಂದ ಕೂಡಲೇ ಲೋಕಾಪೂರದಿಂದ ಧಾರವಾಡದವರೆಗೆ ರಾಮದುರ್ಗ ಸವದತ್ತಿ ರೈಲ್ವೆ ಮಾರ್ಗ ನಿರ್ಮಾಣದ ಕಾಮಗಾರಿ ಪ್ರಾರಂಭಿಸಿ ಹತ್ತಾರು ಜಿಲ್ಲೆಗಳ ಕಾರ್ಮಿಕರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರು ಹಾಗೂ ಸದಸ್ಯರೆಲ್ಲರೂ ಸೇರಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲೆ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ “ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡದವರೆಗೆ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲು ರಾಜ್ಯ ಸರ್ಕಾರದಿಂದ ಭೂಮಿ ಕೊಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯ ರಾಜ್ಯಾಧ್ಯಕ್ಷ ಕುತಬುದ್ದೀನ್ ಖಾಜಿ, ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರಾದ ಜಿ.ಎಮ್. ಜೈನೇಖಾನ್, ಮೊಹಮ್ಮದಶಫಿ ಬೆಣ್ಣಿ , ಚಂದ್ರು ಮಾಳದಕರ , ಎಮ್.ಕೆ. ಯಾದವಾಡ, ಸುಭಾಷ ಘೋಡಕೆ,ಅಭಿಜೀತ ಮುನ್ನವಳ್ಳಿ, ದಾದಾಪೀರ ಕೆರೂರ ಸಂಜೆಯ ಕಪಾಲಿ, ಮಾನವ ಬಂಧುತ್ವ ವೇದಿಕೆ,ತಾಲೂಕಾ ಅಧ್ಯಕ್ಷ,ಭೀಮಶಿ ಕನಕನ್ನವರ ಮುಂತಾದವರು ಉಪಸ್ಥಿತರಿದ್ದರು.