ಬೀದರ್/ಚಿಟಗುಪ್ಪ: ಪರಿಸರದ ಪ್ರಾಮುಖ್ಯತೆಯನ್ನು ಅರಿಯಬೇಕು, ಎಲ್ಲಾ ವೆಚ್ಚದಲ್ಲಿ ಪರಿಸರವನ್ನು ಸಂರಕ್ಷಿಸಬೇಕು. ಭೂಮಿಯನ್ನು ಎಲ್ಲರಿಗೂ ಉತ್ತಮ ಮತ್ತು ಸ್ವಚ್ಛವಾದ ಆವಾಸಸ್ಥಾನವನ್ನಾಗಿ ಮಾಡುವಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾಹಿತಿ, ಪರಿಸರ ಸಂರಕ್ಷಕ ಸಂಗಮೇಶ ಎನ್ ಜವಾದಿ ಹೇಳಿದರು.
ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಜ್ಞಾನ ವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹವಾಮಾನ ಬದಲಾವಣೆಯು ಭೂಮಿಯ ಮೇಲಿನ ಸಂಪನ್ಮೂಲಗಳನ್ನು ತೀವ್ರವಾಗಿ ಕ್ಷೀಣಿಸಿರುವುದರಿಂದ ನಮಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯಿದೆ. ಇದೀಗ ನಾವು ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ನಾವು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ಸಂರಕ್ಷಣೆಗಾಗಿ ಹಗಲಿರುಳು ಕೆಲಸ ಮಾಡುತ್ತಿರುವುದು ಪರಿಸರವಾದಿಗಳಿಗೆ ಸಂತೋಷಕರ ಸಂಗತಿಯಾಗಿದೆ.
ಜ್ಞಾನ ವಿಕಾಸ ಕಾರ್ಯಕ್ರಮದಿಂದ ಅನೇಕ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ಪುರುಷರಂತೆ ಸಮನಾಗಿ ಭವ್ಯ ಭಾರತದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ ಎಂದರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ನಿಸ್ವಾರ್ಥ ಸೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಪುರಸಭೆ ಸದಸ್ಯ ವಿಶಾಲ ಭೋರಾಳೆ ವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ಶೋಭಾ ಮೇಡಂ ರವರು ಪ್ರಾಸ್ತಾವಿಕವಾಗಿ
ಮಾತನಾಡಿದರು.
ಗ್ರಾಮದ ಮಹಿಳಾ ಪ್ರತಿನಿಧಿ ಸಂಗೀತ ಪಾಟೀಲ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ತರಕಾರಿ ಸಸಿಗಳು, ಕೈತೋಟ ಸಸಿಗಳು ಹಾಗೂ ವಿವಿಧ ಪ್ರಕಾರಗಳ ಸಸಿಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರೇಣುಕಾ ಮೇಡಂ ರವರು ಸೇರಿದಂತೆ
ಗಣ್ಯರು, ಮಾತೆಯರು ಉಪಸ್ಥಿತರಿದ್ದರು.