ಬೀದರ್: ದೇಶದ ವಿವಿಧ ರೈಲೈ ನಿಲ್ದಾಣಗಳಿಗೆ ಸಮಾಜ ಸುಧಾರಕರ, ನಿಸ್ವಾರ್ಥ ಸೇವಕರ, ದೇಶಕ್ಕಾಗಿ ಬಲಿದಾನ ಮಾಡಿದ ತ್ಯಾಗವೀರರ, ಮಠಾಧೀಶರ ಹೆಸರುಗಳು ನಾಮಕರಣ ಮಾಡಿದಂತೆ ಬೀದರ ರೈಲ್ವೆ ನಿಲ್ದಾಣಕ್ಕೂ ಕೂಡಾ ಕನ್ನಡ ನಾಡಿನ ಶ್ರೇಷ್ಠ ಮಠಾಧೀಶರು, ಭಾವೈಕ್ಯತೆಯ ಸಂತರಾದ ಪರಮ ಪೂಜ್ಯ ಚನ್ನಬಸವ ಪಟ್ಟದ್ದೇವರು ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಸಾಹಿತಿ, ಹೋರಾಟಗಾರ ಸಂಗಮೇಶ ಎನ್ ಜವಾದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.
ಶ್ರೀಗಳ ಹೆಸರು ಇಡುವುದು ಅತ್ಯಂತ ಸಮಂಜಸ ಹಾಗೂ ಸೂಕ್ತ, ಇದರಿಂದ ಈ ಭಾಗಕ್ಕೆ ಒಳ್ಳೆಯ ಗೌರವ ಬರುತ್ತದೆ ಎಂದು ಸಂಗಮೇಶ ಎನ್
ಜವಾದಿಯವರ ಸದಾಶಯವಾಗಿದೆ.
ಕಲ್ಯಾಣ ಕರ್ನಾಟಕದ ಜನತೆಯ ಆರಾಧ್ಯ ದೇವರು, ಈ ನಾಡಿನ ಮಾನವೀಯತೆಯ ಮೌಲ್ಯಾಧಾರಿತ ಪ್ರತಿಪಾದಕರು. ಈ ನಾಡಿನ ಪ್ರತಿಯೊಂದು ಕುಟುಂಬದಲ್ಲಿ. ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಂದಿರದಲ್ಲಿ ನೆಲಸಿರುವ ಭಾಲ್ಕಿಯ ಲಿಂಗೈಕ್ಯ ಶ್ರೀ ಚನ್ನಬಸವ ಪಟ್ಟದ್ದೇವರ ಹೆಸರು ಅಜರಾಮರ.
ಇಂತಹ ತ್ಯಾಗ ಮೂರ್ತಿಗಳ ಹೆಸರು ಬೀದರ ರೈಲ್ವೆ ನಿಲ್ದಾಣಕ್ಕೆ ಆದಷ್ಟು ಬೇಗ ಇಡುವಂತೆ ಸಂಬಂಧ ಪಟ್ಟವರು (ಶಿಪಾರಸ್ಸು ಮಾಡಲು)ಮುಂದಾಗಬೇಕೆಂದು ವಿನಂತಿಸಿದ್ದಾರೆ.
ಅಂದಹಾಗೆ ಶ್ರೀ ಭಾಲ್ಕಿ ಹಿರೇಮಠವು ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಶ್ರೀ ಮಠವು ಈ ನಾಡಿನ ಸರ್ವ ಜನಾಂಗದ ಜನತೆಗೆ, ಜಾತ್ಯಾತೀತವಾಗಿ ತ್ರಿವಿಧ ದಾಸೋಹ, ಜ್ಞಾನದಾಸೋಹ ಹಾಗೂ ಜೀವನದಲ್ಲಿ ನೊಂದು ಬೆಂದು ಬಂದಂತಹ ನಿರ್ಗತಿಕರ ಬಾಳಿಗೆ ಬೆಳಕು ಚೆಲ್ಲಿ ಅಂಥವರ ಬದುಕನ್ನು ರೂಪಿಸಿದ ಕೀರ್ತಿಯು ಶ್ರೀ ಮಠದ ಲಿಂಗೈಕ್ಯ ಪೂಜ್ಯ ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಕನ್ನಡ ಭಾಷೆಯ ಉಳಿವಿಗಾಗಿ ಶಿಕ್ಷಣ ಕೇಂದ್ರಗಳು ಆರಂಭಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಮಾನತೆ, ಸಾಮಾಜಿಕ ಕಳಕಳಿ, ಭಕ್ತರ ಶ್ರೇಯೋಭಿವೃದ್ಧಿಗಾಗಿ ಹಗಲಿರಳು ಚಿಂತನೆಯನ್ನು ನಡೆಸಿ , ಜಲ ಕ್ರಾಂತಿ, ಹಸಿರು ಕ್ರಾಂತಿ, ಸ್ವಚ್ಛತೆ, ಮೂಡನಂಬಿಕೆ, ಬಾಲ್ಯ ವಿವಾಹ, ಮಧ್ಯಪಾನ ನಿಷೇಧ ಇಂತಹ ಹತ್ತು ಹಲವಾರು ವಿಷಯಗಳ ಕುರಿತು ಹೋರಾಟ ಮಾಡಿದ್ದಾರೆ. ಸಾರ್ವಜನಿಕರಿಗೆ ಅರಿವು ಸಹ ಮೂಡಿಸಿದ್ದಾರೆ.ಸರ್ಕಾರದ ಉನ್ನತಾಧಿಕಾರಿಗಳು ಭೇಟಿ ನೀಡಿ ಪ್ರಶಂಶಿಸಿದ್ದಾರೆ,ಇವರ ನಿಸ್ವಾರ್ಥ ಸೇವೆ ಕಂಡು ದೇಶವೇ ಹೆಮ್ಮೆ ಪಡುತ್ತಿದೆ.
ಅಲ್ಲದೆ ನಾಡಿನ, ರಾಜ್ಯದ, ರಾಷ್ಟ್ರಮಟ್ಟದ ಗಣ್ಯ ವ್ಯಕ್ತಿಗಳನ್ನು ಕರೆಸಿ, ಕಲೆ, ಸಾಹಿತ್ಯ, ಸಂಗೀತ, ಸಂಶೋಧನೆ, ಕೃಷಿ, ಹೈನುಗಾರಿಕೆ, ಸಮಾಜ ಸೇವೆ ಹಾಗೂ ರಾಷ್ಟ್ರಮಟ್ಟದಲ್ಲಿ ದೇಶಕ್ಕೆ,ನಾಡಿಗೆ ಸೇವೆ ಸಲ್ಲಿಸಿದವರನ್ನು ಶ್ರೀ ಮಠಕ್ಕೆ ಕರೆಸಿ ಸನ್ಮಾನಿಸಿ ಪ್ರೋತ್ಸಾಹ ನೀಡುವಂತಹ ಕೆಲಸವೂ ಇಂದಿನ ಪರಮ ಪೂಜ್ಯರಾದ ಬಸವಲಿಂಗ ಪಟ್ಟದ್ದೇವರು ಹಾಗೂ ಗುರು ಬಸವ ಪಟ್ಟದ್ದೇವರು ಚಾಚೂ ತಪ್ಪದೆ ಮಾಡಿಕೊಂಡು ಬರುತ್ತಿದ್ದಾರೆ.
ಶ್ರೀಮಠವು ಸರ್ವರನ್ನು ಪ್ರೋತ್ಸಾಹಿಸಿ ಬೆಳಸುತ್ತಿದೆ. ಅಲ್ಲದೆ ಧಾರ್ಮಿಕ ಅಧ್ಯಾತ್ಮಿಕ ಕ್ಷೇತ್ರದ ನಾಡಿನ ಹಲವಾರು ಪೂಜ್ಯರನ್ನು ಕರೆಸಿ ನಾಡಿನ ಜನತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಇಂದಿನ ಶ್ರೀಗಳಿಂದ, ಹಾಗೂ ಸಾಧಕರಿಂದ ಜ್ಞಾನ ಸಂಪತ್ತನ್ನು ಕೊಡಿಸುತ್ತಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಪ್ರಸ್ತುತ ಬೀದರ ರೈಲ್ವೆ ನಿಲ್ದಾಣಕ್ಕೆ ಪರಮ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಿದರೆ ಜಾಗತಿಕ ಮಟ್ಟದಲ್ಲಿ ಬೀದರ ಪ್ರಸಿದ್ಧಿಯನ್ನು ಪಡೆಯುತ್ತದೆ. ಈ ಕುರಿತು ಈ ಭಾಗದ ಸರ್ವ ನಾಗರಿಕರು ನೇತಾರರು ಸಾಹಿತಿಗಳು ಚಿಂತಕರು , ಯುವ ಜನಾಂಗ, ಸರ್ವ ಪಕ್ಷಗಳ ರಾಜಕೀಯ ನೇತಾರರು ಗಂಭೀರವಾಗಿ ಚಿಂತನೆ ಮಾಡಬೇಕು. ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕು. ಬೀದರ ರೈಲ್ವೆ ನಿಲ್ದಾಣಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರೈಲ್ವೆ ನಿಲ್ದಾಣ ಎಂದು ಹೆಸರಿಡಬೇಕೆಂದು ಕೋರುತ್ತೇನೆ. ಹಾಗೂ ಈ ಪ್ರಸ್ತಾವನೆಯನ್ನು ಬೆಂಬಲಿಸಿ ತಾವುಗಳು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೋರುತ್ತಾ , ಇದು ಒಬ್ಬರ ಕೋರಿಕೆಯಾಗಬಾರದು ಈ ನಾಡಿನ ಭಕ್ತರ ಎಲ್ಲರ ಕೋರಿಕೆಯಾಗಬೇಕು ಎಂದು ತಮ್ಮೆಲ್ಲರಲ್ಲಿಯೂ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
-ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು, ಹೋರಾಟಗಾರರು.
ಬೀದರ ಜಿಲ್ಲೆ.
