ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಣ ಪ್ರತಿಷ್ಠೆಯ ಪರಿಣಾಮ…!!

ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣ ಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ.
ತಮ್ಮಲ್ಲಿ ಜ್ಞಾನ, ತಿಳುವಳಿಕೆ ಇಲ್ಲದಿದ್ದರೂ ಇದೆ ಎಂದು ಸಾಬೀತು ಪಡಿಸುವುದು. ವಸ್ತ್ರ- ಒಡವೆಗಳ ಮೂಲಕ ತಾವೇ ಶ್ರೀಮಂತರು ಎಂಬುದನ್ನು ತೋರಿಸುವ ಇಲ್ಲಸಲ್ಲದ ಒಣ ಪ್ರತಿಷ್ಠೆಯು ದುರಂತಮಯಕ್ಕಿಡಾಗುತ್ತದೆ ಎನ್ನುವುದಕ್ಕೆ ಇದು ಅತ್ಯಂತ ಸೂಕ್ತ ದೃಷ್ಟಾಂತವಾಗಿದೆ. ಇಂತಹ ಋಣಾತ್ಮಕ ವಿಚಾರಗಳು ಅದೆಷ್ಟು ಮೂರ್ಖತನದಿಂದ, ಮೌಢ್ಯದಿಂದ ಅಷ್ಟೇ ಅಕ್ಕರೆ ತುಂಬಿದ ಪ್ರೀತಿಯಿಂದ ಕೂಡಿರುತ್ತವೆ ಎಂಬುದಕ್ಕೆ ಇದೊಂದು ಘನಘೋರ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ.‌
ರವಿ‌ ಮತ್ತು ರಘು ಇಬ್ಬರೂ ಒಂದೇ ಶಾಲೆಯಲ್ಲಿ,‌ ಒಂದೇ‌ ತರಗತಿಯಲ್ಲಿಯೇ ಓದುತ್ತಿರುವ ಅಕ್ಕಪಕ್ಕದ ಮನೆಯ ಮಕ್ಕಳು. ಒಮ್ಮೆ ಶಾಲೆಯ ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗ ರವಿಯು ಎಲ್ಲಾ ವಿಷಯಗಳಲ್ಲೂ ಎ+ ಶ್ರೇಣಿಯನ್ನು ಹಾಗೂ ರಘು ಬಿ+ ಶ್ರೇಣಿಯನ್ನು ಪಡೆದುಕೊಳ್ಳುತ್ತಾನೆ,
ಫಲಿತಾಂಶ ಬರಬರುತ್ತಿದ್ದಂತೆಯೇ ರವಿಯ ತಾಯಿಯು ಮಗನ ಪ್ರಗತಿ ಪತ್ರವನ್ನು ಓಣಿಯಲ್ಲೆಲ್ಲಾ ತೋರಿಸಿ ತುಂಬಾನೇ ಅಹಂಕಾರ ಪಡುತ್ತಾ ” ನನ್ನ ಮಗ ತುಂಬಾನೇ ಬುದ್ದಿವಂತ ಅವನು ಎಲ್ಲದರಲ್ಲೂ ಎ+ ಅಂಕ ತೊಗೊಂಡು ಪಾಸಾಗಿದ್ದಾನೆ ಎಂದು ಹೇಳುತ್ತಾ ಹೋಗುತ್ತಾಳೆ ತದ ನಂತರದಲ್ಲಿ ರಘುವಿನ ತಾಯಿಯೂ ಕೂಡಾ ಅಷ್ಟೇ ಜಂಭದಿಂದ “ನನ್ನ ಮಗ ಬಿ+ ಅಂಕ ಪಡೆದಿರಬಹುದೇನೋ ನಿಜ ಆದರೆ ನನ್ನ ಮಗನ ರಕ್ತದ ಗುಂಪು ಮಾತ್ರ ಎ+ ಇದೆ. ಹೀಗಾಗಿ ರವಿಯು ಈ ಒಂದು ಪರೀಕ್ಷೆಯಲ್ಲಿ ಮಾತ್ರ ಅದೇನೋ ಆಕಸ್ಮಿಕವಾಗಿ ಅದೃಷ್ಟವಶಾತ್ ಎ+ ತೊಗೊಂಡಿದ್ದಾನೆ. ಇದರಿಂದಾಗಿ ಮುಂದಿನ ಪರೀಕ್ಷೆಯಲ್ಲಿ ನನ್ನ ಮಗನೇ ಹೆಚ್ಚು ಅಂಕ ತೆಗೆದುಕೊಳ್ಳೊದು” ಎಂದು ಆಕೆಗಿಂತಲೂ ಹೆಚ್ಚಾಗಿ ಪ್ರಚಾರ ಮಾಡಿ ರವಿಯ ತಾಯಿಯು ಕಸಿವಿಸಿಗೊಳ್ಳುವಂತೆ ಮಾಡುತ್ತಾಳೆ.
ಇದರಿಂದಾಗಿ ಕೊತಕೊತ ಕುದಿಯುವ ಕೋಪದಲ್ಲಿ ತನ್ನ ಮಗನಾದ ರವಿಗೆ ಆಕ್ರೋಶಭರತಳಾಗಿ ಹೇಳುತ್ತಾಳೆ ” ಏ..!! ರವಿ ಮುಂದಿನ ಸೆಮಿಸ್ಟರ್ ಪರೀಕ್ಷೆಯಲ್ಲಿ ನೀನು ಹೇಗಾದ್ರೂ ಮಾಡಿ ನಿನ್ನ ರಕ್ತವನ್ನು ಕೂಡಾ ಎ+ ಗೆ ಪರಿವರ್ತನೆ ಆಗುವ ಹಾಗೆ ಪರೀಕ್ಷೆ ಬರೆಯಬೇಕು” ಎಂದು ಮತ್ಸರ ತುಂಬಿದ ಮೂರ್ಖತನದ ಪರಮಾವಧಿ ಮೀರಿದ ಭಾವನೆಯೊಂದಿಗೆ ರವಿಗೆ ಬಲವಾದ ಒತ್ತಡ ಹಾಕುತ್ತಾಳೆ.
ವಿಚಲಿತನಾದ ರವಿಯು ತನ್ನ ರಕ್ತದ ಗುಂಪು ಬಿ+ ಇದೆ. ಹಾಗೆಯೇ ಪಕ್ಕದ ಮನೆಯ ಗೆಳೆಯನಾದ ರಘು ಕೇವಲ ಬಿ+ ಶ್ರೇಣಿಯಲ್ಲಿ ಪಾಸಾಗಿದ್ದರೂ ಕೂಡಾ ಅವನ ರಕ್ತದ ಗುಂಪು ಮಾತ್ರ ಬಿ+ ಇದೆ. ಇದು ಹೇಗಾಗಿರಬಹುದು ಎಂದು ಯೋಚಿಸುತ್ತಾ ಕೀಳರಿಮೆಗೆ ಜಾರುತ್ತಾನೆ.
ಸಾಕಷ್ಟು ಅಹಂಕಾರದಿಂದ ಮೆರೆಯುತ್ತಿದ್ದ ರವಿಯ ತಾಯಿಗೆ ರಘುವಿನ ತಾಯಿಯು ” ನಿಮ್ಮ ಮಗ ಎಷ್ಟೇ ಅಂಕ ತೊಗೊಂಡ್ರು ಎ+ ನಲ್ಲಿ ಪಾಸಾದ್ರೂ ಕೂಡಾ ನನ್ನ ಮಗನ ಹಾಗೆ ನಿಮ್ಮ ಮಗನ ದೇಹದಲ್ಲಿ ಎ+ ರಕ್ತವು ಹರಿಯುತ್ತಿಲ್ಲ. ಇದು ಆಕಸ್ಮಿಕವಾಗಿ ಬಂದಂತಹ ಫಲಿತಾಂಶ. ರಕ್ತದಲ್ಲಿ ಎ+ ಇದ್ದರೆ ಜೀವನಪೂರ್ತಿ ಎ+ ಶ್ರೇಣಿಯನ್ನು ಪಡೆಯಬಹುದು” ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟು ಅಷ್ಟೇ ವ್ಯಂಗವಾಗಿ ಮೂದಲಿಸುತ್ತಾಳೆ.
ರವಿಯ ತಾಯಿಯು ಪದೆ ಪದೆ ಹೀಗೆಯೆ ರೊಚ್ಚಿಗೆದ್ದು ಕಸಿವಿಸಿಗೊಂಡಂತಾಗುತ್ತಿದ್ದಳು ಇದರಿಂದ ನಮಗೆ ಸಾಕಷ್ಟು ಹಿನ್ನಡೆಯಾಗಿದೆ ಎಂದು ಭಾವಿಸುತ್ತಾಳೆ ಮತ್ತು ನಿದ್ರೆ ಕೂಡಾ ಮಾಡದೇ ಅದರ ಬಗ್ಗೆ ಗಂಭೀರವಾಗಿ ವಿಚಾರಿಸುವಂತವಳಾಗುತ್ತಾಳೆ. ಕೊನೆಕೊನೆಗೆ ಘನತೆವೆತ್ತ ಆ ಮಹಾತಾಯಿ ಮಗನಿಗೆ ಸಿಟ್ಟಿನಿಂದ, ಆಕ್ರೋಶಭರಿತಳಾಗಿ ಹೇಳುತ್ತಾಳೆ. “ಮಗನೇ, ಇನ್ನು ಮುಂದಿನ ದಿನಗಳಲ್ಲಿ ನೀನು ಅವನ ರಕ್ತದ ಗುಂಪುನ್ನು ಕೂಡಾ ಹಿಂದೆ ಹಾಕಿ ಅದರಲ್ಲೂ ಕೂಡಾ ಎ+ ಶ್ರೇಣಿಯನ್ನು ಪಡೆದುಕೊಳ್ಳಬೇಕು..!!! ” ಎಂದು ಮೂರ್ಖತನದಿಂದ ಕಟ್ಟುನಿಟ್ಟಾಗಿ ಆದೇಶಿಸುತ್ತಾಳೆ.
ಇದರಿಂದಾಗಿ ರವಿಯು ಮತ್ತೆ ಮತ್ತೆ ತುಂಬಾ ಗಲಿಬಿಲಿಗೊಳಗಾಗುತ್ತಾನೆ. ಅಂಕಗಳನ್ನು ಪಡೆಯುದರಲ್ಲಿ ಹೇಗಾದ್ರೂ ಮಾಡಿ ಎ+ ತೆಗೆದುಕೊಳ್ಳಬಹುದು ಆದರೆ ಅವನ ರಕ್ತದಲ್ಲಿರುವ ಈ ಎ+ ಅಂಶವನ್ನು ಹೇಗಪ್ಪಾ ಬದಲಾಯಿಸೋದು ಭಗವಂತ..!? ಎಂದು ಚಿಂತಾಕ್ರಾಂತನಾಗುತ್ತಾನೆ.
ತನ್ನ ಸಹಪಾಠಿಯಾದ ಆತ್ಮೀಯ ರಘುವಿನ ರಕ್ತವನ್ನು ಬಹುಶಃ ತಾನು ಕುಡಿದರೆ ಮಾತ್ರ ನಾನು ನನ್ನ ದೇಹದಲ್ಲಿ ಎ+ ರಕ್ತವನ್ನು ಪಡೆಯಬಹುದಲ್ವಾ ಎಂಬ ದುಸ್ಸಾಹಸದ ದೂ(ದು)ರಾಲೋಚನೆಯನ್ನೂ ಕೂಡಾ ಮಾಡುತ್ತಾನೆ. ತದನಂತರ ತನ್ನ ಬಿ+ ರಕ್ತವನ್ನು ಅವನಿಗೆ ಧಾರೆ ಎರೆಯಬಹುದೆಂದು ಮುಗ್ಧವಾಗಿ ಅಷ್ಟೇ ಆಳವಾಗಿ, ಆಳವಾಗಿಯೂ ಯೋಚಿಸುತ್ತಾ ಅಳಲು ಪ್ರಾರಂಭಿಸುತ್ತಾನೆ.
ಈ ಒಂದು ನಿಷ್ಪ್ರಯೋಜಕ ಯೋಚನೆಯು ಅವನನ್ನು ತುಂಬಾ ಘಾಸಿಗೊಳಿಸಲಾರಂಬಿಸುತ್ತದೆ. ದಿನಗಳೆದಂತೆ ಅವನನ್ನು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತದೆ. ಇಂತಹ ಕ್ರೂರ ಆಲೋಚನೆಗಳು ಮಕ್ಕಳಿಗೆ ಬರಬಾರದೆಂದರೆ ಪಾಲಕರು ಹೃದಯ ವೈಶಾಲ್ಯತೆಯನ್ನು ಹೊಂದಿರಬೇಕು ಅನ್ನೋದಕ್ಕೆ ‌ಇದು ಒಳ್ಳೆಯ ಉದಾಹರಣೆಯಾಗುತ್ತಿಯಲ್ಲವೇ..?
ದಾರಿ ತೋಚದಂತಾದಾಗ ಕೊನೆಯಲ್ಲಿ ಇಬ್ಬರೂ ಸೇರಿ ತಮ್ಮ ತರಗತಿಯ ನೆಚ್ಚಿನ ಗುರುಗಳ ಹತ್ತಿರ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ಬಗೆಹರಿಸಲು ಮನವಿ ಮಾಡಿಕೊಳ್ಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡ ಗುರುಗಳು ಇಬ್ಬರೂ ತಾಯಂದಿರನ್ನು ಕರೆದು “ನೋಡ್ರಮ್ಮಾ ತಾಯಿ ಜಾಣತನ ಅಥವಾ ಬುದ್ಧಿವಂತಿಕೆ ಅನ್ನೋದು ರಕ್ತದಲ್ಲಾಗಲಿ, ರಕ್ತದ ಗುಂಪಿನಲ್ಲಾಗಲಿ ಇರುವುದಿಲ್ಲ. ಯಾರು ಶ್ರಮಪಡುತ್ತಾರೋ ಅವರಿಗೆ ಯಶಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ. ನಿಮ್ಮ ನಿಮ್ಮ ಒಣ ಪ್ರತಿಷ್ಠೆಗಾಗಿ ಮಕ್ಕಳನ್ನು ಬಳಸಿಕೊಳ್ಳಬೇಡಿ. ಅದರ ಬದಲು‌ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ನೈತಿಕತೆಯ ತಿಳುವಳಿಕೆ ನೀಡಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳನ್ನು ಸದೃಢರನ್ನಾಗಿ ಮಾಡುವಲ್ಲಿ ಎಲ್ಲಾ ತಾಯಂದಿರು ಹೆಚ್ಚು ಆಸಕ್ತಿಯನ್ನು ತೋರಿಸಿ ಮಕ್ಕಳ ಬಾಳಲ್ಲಿ ಬೆಳಕಾಗಿರಿ ” ಎಂದು ಬುದ್ಧಿವಾದ ಹೇಳಿ ಮಾರ್ಗದರ್ಶನ ಮಾಡಿ ಕಳಿಸಿಕೊಡುತ್ತಾರೆ.
ಪರಿಣಾಮವಾಗಿ ಇಬ್ಬರೂ ಆತ್ಮೀಯ ಗೆಳೆಯರಾದ್ದರಿಂದ ತಮ್ಮ ಇಬ್ಬರೂ ತಾಯಂದಿರಿಗೆ ಮನವೊಲಿಸಿ ಒಟ್ಟಿಗೆ ಹೇಳುತ್ತಾರೆ “ನಿಮ್ಮ ನಿಮ್ಮ ಈ ಒಣಪ್ರತಿಷ್ಠೆಗಾಗಿ ನಮ್ಮನ್ನು ಬಲಿಕೊಡಬೇಡಿ. ಇಲ್ಲಸಲ್ಲದ ಒಣಪ್ರತಿಷ್ಠೆಗಾಗಿ ನಮ್ಮನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಈ ರೀತಿ ನೀವು ದುಡುಕುವುದರಿಂದ ನಮ್ಮ ಅಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಕ್ಷುಲ್ಲಕ ಮನೋಭಾವ ತೊರೆದು ವಿಶಾಲವಾದ ಮನೋಭಾವದೊಂದಿಗೆ ಬಾಳೋಣ ಎಂಬ ಗುರುಗಳು ಹೇಳಿದ ಐಕ್ಯತೆಯನ್ನು ಬಲಪಡಿಸೋಣ. ಅದರಂತೆಯೇ ನಡೆದುಕೊಳ್ಳೋಣ” ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾ ಇಬ್ಬರೂ ಆತ್ಮೀಯ ಗೆಳೆಯರು ತಮ್ಮ ತಮ್ಮ ತಾಯಂದಿರಿಗೆ ಗುರುಗಳು ಹೇಳಿದ ಮಾತಿನಂತೆ ನಡೆದುಕೊಳ್ಳೋಣ ಎಂದು ವಿನಂತಿಸಿಕೊಳ್ಳುತ್ತಾರೆ.
ಅಂದಿನಿಂದ ಇಬ್ಬರೂ ತಾಯಂದಿರು ಮಕ್ಕಳ ಮೇಲೆ ಹೆಚ್ಚಿನ ಅಂಕ ಪಡೆಯುವ ಅತಿಯಾದ ಒತ್ತಡವನ್ನು ಹಾಕುವುದನ್ನು ನಿಲ್ಲಿಸುತ್ತಾರೆ. ಮಕ್ಕಳನ್ನು ನೈಜವಾಗಿ ಪ್ರೀತಿಸಲಾರಂಭಿಸುತ್ತಾರೆ. ಮಕ್ಕಳಿಗೆ ತಿಳುವಳಿಕೆ ನೀಡಿ ಸೂಕ್ತವಾದ ಜ್ಞಾನವನ್ನು ನೀಡುವುದನ್ನು ಬಿಟ್ಟು ಈ ರೀತಿಯಾಗಿ ಚಿಂತೆ ಮಾಡುತ್ತಾ ಒಣಪ್ರತಿಷ್ಠೆಗಾಗಿ ಇಡೀ ಕುಟುಂಬದ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದು ಬೇಡ ಎಂದು ಶಪತಗೈಯ್ಯುತ್ತಾರೆ. ಅಂದಿನಿಂದಲೂ ಈ ಮಕ್ಕಳಿಬ್ಬರೂ ತರಗತಿಯಲ್ಲಿ ಟಾಪರ್ ಗಳಾಗಿ‌ ಮುಂದುವರೆದಿದ್ದಾರೆ.
ಆದ್ದರಿಂದ ಇಂತಹ ಅಪ್ರಬುದ್ಧ ದೂ(ದು)ರಾಲೋಚನೆಗಳಿಂದ ದೂರವಿರುವ ಒಂದು ಸದ್ವಿಚಾರವನ್ನು ಎಲ್ಲಾ ಪಾಲಕರು ರಕ್ತಗತವಾಗಿಸಿಕೊಳ್ಳಬೇಕು. ನಿಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಸುವುದನ್ನು ಮಾತ್ರ ಯಾವತ್ತಿಗೂ ಮಾಡಬೇಡಿ. ಇದರಿಂದಾಗಿ ಅವರು ಹತಾಶರಾಗುತ್ತಾರೆ, ಕೀಳರಿಮೆಯುಂಟಾಗಿ ಆಘಾತಕ್ಕೊಳಗಾಗುತ್ತಾರೆ. ಒಬ್ಬರಲ್ಲಿರುವ ಪ್ರತಿಭೆ ಇನ್ನೊಬ್ಬರಲ್ಲಿರಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಭೆಗಳು ವಿಭಿನ್ನವಾಗಿರುತ್ತವೆ. ನಿಮ್ಮ ನೆತ್ತರಿನಲ್ಲಿ ಹರಿಯುವ ಒಣಪ್ರತಿಷ್ಠೆಯನ್ನು ಸರ್ವನಾಶ ಮಾಡಿ ಮಕ್ಕಳನ್ನು ಎತ್ತರೆತ್ತರಕ್ಕೆ ಬೆಳೆಸುವಂಥಹ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಿ. ಮಕ್ಕಳ ಆಸಕ್ತಿಗನುಗುಣವಾಗಿ ಸೂಕ್ತವಾದ, ಸುಪ್ತವಾದ ಪ್ರತಿಭೆಯನ್ಮು ಸೂಕ್ಷ್ಮವಾಗಿ ಪರಿಶೀಲಿಸಿ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿದ್ದಾದರೆ ಖಂಡಿತವಾಗಿಯೂ ಆ ಮಗು ಈ ದೇಶದ ಅನರ್ಘ್ಯ ರತ್ನವಾಗುತ್ತದೆ..!!

  • ಶ್ರೀ ಶ್ರೀನಿವಾಸ. ಎನ್. ದೇಸಾಯಿ, ಶಿಕ್ಷಕರು.
    ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ,
    ಕುಷ್ಟಗಿ. ಕೊಪ್ಪಳ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ