ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗೃಹಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರು ದೇಶದ ಜನರ ಮುಂದೆ ಕ್ಷಮೆ ಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಎಸ್ಸಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲೂರ ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಹೇಳಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವ, ಪ್ರೀತಿ ಇಲ್ಲ. ಆರ್‌ಎಸ್‌ಎಸ್ ಸಿದ್ಧಾಂತವೇ ಅವರಿಗೆ ಸಂವಿಧಾನವೆಂದು ಮಲ್ಲಿಕಾರ್ಜುನ ನೀಲೂರ ವ್ಯಂಗ್ಯವಾಡಿದ್ದಾರೆ.
‘ಅಮಿತ್ ಷಾ ಅವರು ಕೇವಲ ಅಂಬೇಡ್ಕರ್ ಅವರನ್ನು ಮಾತ್ರ ಅವಮಾನಿಸಿಲ್ಲ. ಸಮಸ್ತ ಭಾರತೀಯರನ್ನು ಅವಮಾನಿಸಿದ್ದಾರೆ. ಪದೇ ಪದೇ ಅಂಬೇಡ್ಕರ್ ಅವರ ಬಗ್ಗೆ ಗೌರವದ ಮಾತು ಆಡುವ ಪ್ರಧಾನಿ ಮೋದಿ ಅವರು ಈಗ ಏಕೆ ಮೌನ ವಹಿಸಿದ್ದಾರೆ. ತಕ್ಷಣ ಅವರು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
‘ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜವಾಗಲೂ ಡಾ. ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಅಮಿತ್ ಶಾ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು. ‘ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನ ಮಾಡುವ ಮೂಲಕ ಕೋಟಿ ಕೋಟಿ ಅಂಬೇಡ್ಕರ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ.ಕೂಡಲೇ ಅವರು ತಕ್ಷಣ ಕ್ಷಮೆ ಕೇಳದಿದ್ದರೆ ಉಗ್ರರೂಪದ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
