ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ಆಗ್ರಹಿಸಿ ಸವದತ್ತಿ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕ ರೆಲ್ಲರೂ ಸೇರಿ ಇದೆ ಡಿ.16ರಂದು ಪಟ್ಟಣದ APMC ಮಾರುಕಟ್ಟೆಯಿಂದ ತಹಶೀಲ್ದಾರ ಕಚೇರಿವರಿಗೆ ಬೃಹತ್ ಪಾದಯಾತ್ರೆ ನಡೆಸಿ ತಹಶೀಲ್ದಾರ ಅವರ ಮುಖಾಂತರ CM ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಸವದತ್ತಿ ಪಟ್ಟಣದ ಗಾಂಧಿ ಸರ್ಕಲ್ ಹತ್ತಿರ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯ ರಾಜ್ಯಾಧ್ಯಕ್ಷ, ಕುತಬುದ್ದಿನ ಕಾಜಿಯವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಕೂಡಾ ಆರಂಭಿಸಿದ್ದರು.
ಇವತ್ತು ಅಂದರೆ ಡಿ.20 ರಂದು ಸವದತ್ತಿ ಪಟ್ಟಣದ ಶಾಸಕರಾದ ಮಾನ್ಯ ವಿಶ್ವಾಸ ವೈದ್ಯೆರವರು ಧರಣಿ ಸತ್ಯಾಗ್ರಹದ ವೇದಿಕೆಗೆ ಆಗಮಿಸಿ ಮಾತನಾಡಿ “ಸವದತ್ತಿ ಪಟ್ಟಣದ ಅಭಿವೃದ್ಧಿಗಾಗಿ ರೈಲ್ವೆ ಮಾರ್ಗ ಅವಶ್ಯಕವಾಗಿದೆ. ಸವದತ್ತಿ ಶ್ರೀ ಯಲ್ಲಮ್ಮ ದೇವಿಯ ದರ್ಶನಕ್ಕೆ ವರ್ಷದಲ್ಲಿ ಕೋಟಿಗೂ ಅಧಿಕ ಭಕ್ತರು ಬರುತ್ತಾರೆ. ರೈಲ್ವೆ ಮಾರ್ಗ ನಿರ್ಮಾಣಗೊಂಡರೆ ಬಡವರಿಗೆ ತುಂಬ ಅನುಕೂಲವಾಗುತ್ತದೆ. ಸತತವಾಗಿ 5 ದಿನಗಳಿಂದ ಧರಣಿ ನಡೆಸಿ ಸಾರ್ವಜನಿಕರಲ್ಲಿ ರೈಲು ಹೋರಾಟದ ಕುರಿತು ಜಾಗೃತಿ ಮೂಡಿಸಿದ ಕುತ್ಬುದ್ದಿನ್ ಕಾಜಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು.ನಾನು ಮತ್ತು ಜಿಲ್ಲೆಯ ಎಲ್ಲ ಶಾಸಕರು ಸಚಿವರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ತಂದು ಆದಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಅದರ ಜತೆಗೆ ಕುತ್ಬುದ್ದಿನ್ ಕಾಜಿಯವರು ಧರಣಿ ಸತ್ಯಾಗ್ರಹವನ್ನು ಹಿಂಪಡೆಯಬೇಕೆಂದು ಕೋರಿಕೊಂಡರು.
ಮಾನ್ಯ ಶಾಸಕರಾದ ವಿಶ್ವಾಸ ವೈದ್ಯೆಯವರು ನೀಡಿದ ಭರವಸೆ ಮತ್ತು ಮನವಿಯ ಮೆರೆಗೆ ಕುತ್ಬುದ್ದಿನ್ ಕಾಜಿಯವರು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದು ನಂತರ ಮಾತನಾಡಿ “ಸವದತ್ತಿ ಶಾಸಕರಾದ ಮಾನ್ಯ ವಿಶ್ವಾಸ ವೈದ್ಯೆ ರವರು ಇವತ್ತು ನಮ್ಮ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ನಿರ್ಮಾಣಕ್ಕಾಗಿ ಸ್ವತಃ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಆದಷ್ಟು ಬೇಗ ಈ ರೈಲು ಯೋಜನೆ ಕಾರ್ಯರೂಪಕ್ಕೆ ತರುವ ಭರವಸೆಯನ್ನು ನಮಗೆ ನೀಡಿದ್ದಾರೆ. ಆದ ಕಾರಣ ತಾತ್ಕಾಲಿಕವಾಗಿ ನಾವು ಈ ನಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆಯುತ್ತಿದ್ದೇವೆ, ಒಂದು ವೇಳೆ ಶಾಸಕರು ಕೊಟ್ಟ ಮಾತು ತಪ್ಪಿದರೆ ನಾವು ಮತ್ತೆ ಧರಣಿ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ ಸತತ 5 ದಿನಗಳಿಂದ ಸವದತ್ತಿ ಪಟ್ಟಣದಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಶಾಸಕರ ಭರವಸೆಯೊಂದಿಗೆ ಇಂದು ಕೊನೆಗೊಂಡಿತು.ಆದಷ್ಟು ಬೇಗ ಈ ಭಾಗಕ್ಕೆ ರೈಲು ಮಾರ್ಗ ನಿರ್ಮಾಣವಾಗಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಈ ಸಂದರ್ಭದಲ್ಲಿ ಸವದತ್ತಿ ಮತ್ತು ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರು,ಪದಾಧಿಕಾರಿಗಳು, ಎಂ. ಕೆ ಯಾದವಾಡ, ಗೈಬು ಜೈನೆಖಾನ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
