ಕೋಳಿಯೊಂದು ಕೂಗಿತಣ್ಣ
ಎಷ್ಟು ಮೊಟ್ಟೆ ಇಡಲಿ ಎಂದು
ಇಟ್ಟು ಇಟ್ಟು ನಾನೇ ಬಳಲಿ
ಸೊಂಟವೆಲ್ಲ ಬಿದ್ದು ಹೋಯ್ತು.
ದಿನವು ಸೂಜಿ ಚುಚ್ಚಿ ಜಗವು
ಮೊಟ್ಟೆಯನ್ನೇ ನೋಡುತಿಹುದು.
ನಿಮ್ಮ ಪಾಪ ನಿಮ್ಮ ಪುಣ್ಯ
ನಿಮ್ಮ ಮೈಗೆ ಹತ್ತುತಿಹುದು.
ಹೇಳಿರಣ್ಣ ಮಾಡಲೇನು?
ನೊಂದು ಬೆಂದು ಬಳಲಿ ಬಿದ್ದು
ಸೋತು ಸತ್ತರುನೂ ಕೂಡಾ
ಮನವ ಕರಗುತ್ತಿಲ್ಲ ಎಂದು
ದಿನವು ಬೇರೆ ರುಚಿಯ ಹಿಡಿದು
ಅಗಿದು ನುಂಗಿ ತೇಲುತಿಹರು
ಮೂಳೆ ಮಜ್ಜೆ ಏನು ಬಿಡದೆ
ನುಂಗಿ ನೀರು ಕುಡಿವರು
ದಿನವು ಬೆಲೆಯ ಏರಿ ನಿಂತೆ
ಮೊಂಡು ಬಿದ್ದು ಕೊಳ್ಳುವಿರಿ
ನಾಳೆ ಬದುಕು ಬಿಟ್ಟು ನಿಂತು
ಕೂಡಿ ಹಾಕಿ ತುಂಬುವಿರಿ.
ನೋಡಿ ನೋಡಿ ಸಾಕು ಆಯ್ತು
ಶಾಪವೊಂದು ಕೊಟ್ಟು ಬಿಡುವೆ
ಮುಂದೆ ಎಂದು ತಿನ್ನದಂತೆ
ನೂರು ರೋಗ ಹೊತ್ತು ತರುವೆ
ಇನ್ನೂ ಸಮಯ ನೀಡಲಾರೆ
ಅರಿತ ಬದುಕೆ ಕೊನೆಯ ಮದ್ದು
ತಿಳಿದು ಬದುಕು ಕಲಿಯಿರಿ
ಅರಿತು ಬದುಕಿ ನಡೆಯಿರಿ.
-ಚೌಡ್ಲಾಪುರ ಸೂರಿ
