ಶಿವಮೊಗ್ಗ : ದಿ. 19/12/2024 ಗುರುವಾರದಂದು ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಕಲಾಪದ ನಂತರದ ಘಟನೆಗಳು ರಾಜ್ಯದ ಜನತೆಯ ಮುಂದೆ ಸತ್ಯ ಶೋಧನೆಗಾಗಿ ಹರಿದಾಡುತ್ತಿದ್ದು ಇಂತಹ ಸಂಧರ್ಭವು ಹೊಣೆಗೇಡಿ ನಿರ್ಧಾರಕ್ಕೆ ಕಾರಣವಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಬಿ. ಜೆ.ಜೆ.ಪಿ ಪ್ರಧಾನ ಕಾರ್ಯದರ್ಶಿಗಳದ ಶ್ರೀ ಡಿ. ಎಸ್. ಅರುಣ ಅವರು ಅಭಿಪ್ರಾಯ ಪಟ್ಟರು.
ಸದನದ ಒಳಗಡೆ ನಡೆದ ಘಟನೆಗಳ ಬಗ್ಗೆ ಗೌರವಾನ್ವಿತ ವಿಧಾನಪರಿಷತ್ತಿನ ಸಭಾಪತಿಗಳು, ಪರಿಷತ್ತಿನ ಅಧಿಕೃತ ಕಡತಗಳು, ದಾಖಲೆಗಳು ಹಾಗೂ ವಿಡಿಯೋಗಳನ್ನು ವೀಕ್ಷಿಸಿದ ನಂತರ ಪರಿಷತ್ತಿನ ಸದಸ್ಯರಾದ ಸಿ.ಟಿ.ರವಿ ಅವರು ಬಳಸಿರಬಹುದು ಎಂಬ ಪದಕ್ಕೆ ದಾಖಲೆಗಳು ಇಲ್ಲದ ಕಾರಣ ಎರಡು ಪಕ್ಷಗಳ ನಡುವಿನ ಪದಗಳ ವಿನಿಮಯದ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ತಮ್ಮ ನಿರ್ಧಾರವನ್ನು ಸದನದಲ್ಲಿ ತಿಳಿಸಿದ ನಂತರ ಅನಿರ್ದಿಷ್ಟವಧಿ ಕಾಲಕ್ಕೆ ಸದನವನ್ನು ಮುಂದೂಡಿದರು.
ಗೌರವಾನ್ವಿತ ಸಭಾಪತಿಗಳು ಸದನದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ ನಂತರ ADGP (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಧಾನ ಪರಿಷತ್ತಿನ ಮಾರ್ಷಲ್ ರನ್ನು ಕರೆದು ಮಾನ್ಯ ಸಿ.ಟಿ.ರವಿ ರವರು ಬೆಂಗಳೂರು ಅಥವಾ ಚಿಕ್ಕಮಂಗಳೂರಿಗೆ ತಲುಪುವವರೆಗೂ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುವಂತೆ ಮೌಖಿತವಾಗಿ ಸೂಚಿಸಿದರು.
ಪ್ರಜಾಪ್ರಭುತ್ವದ ದೇಗುಲವೆನಿಸಿರುವ ಸುವರ್ಣ ಸೌಧದಲ್ಲಿ ಗೂಂಡಾಗಳು ಸಿ.ಟಿ ರವಿಯವರನ್ನು ಹಾಗೂ ನಮ್ಮ ಭಾಜಪ ಶಾಸಕರನ್ನು ಎರಡು ಬಾರಿ ಹಲ್ಲೆ ಮಾಡಲು ಯತ್ನಿಸಿದ ವಿಷಯದ ಬಗ್ಗೆ ಹಾಗೂ ಈ ದುಷ್ಕೃತ್ಯ ನಡೆಸಲು ಅವಕಾಶ ಕಲ್ಪಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ವಿರುದ್ಧ ಭಾಜಪ ಶಾಸಕರೆಲ್ಲ ಕೂಡಿ ಸುವರ್ಣಸೌಧದ ಒಳಗೆ ಮುಖ್ಯದಾರದ ಮೇಲೆ ಧರಣಿ ಮಾಡುತ್ತಿರುವಾಗ ಏಕಾಏಕಿ ವಿಧಾನಪರಿಷತ್ತಿನ ಶಾಸಕರಾದ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಲು ಮುಂದಾದಾಗ, ಸದನದ ಒಳಗೆ ನಡೆದ ಘಟನೆಯ ಕುರಿತು ಗೌರವಾನ್ವಿತ ಸಭಾಪತಿಯವರ ಅನುಮತಿ ಪಡೆದು ಪ್ರಕ್ರಿಯೆ ನಡೆಸುತ್ತಿರುವೆರೇ ಎಂಬ ನಮ್ಮ ಪ್ರಶ್ನೆಗೆ ಕಿಂಚಿತ್ತು ಬೆಲೆ ಕೊಡದೆ,ನೋಟಿಸ್ ಕೂಡ ಜಾರಿ ಮಾಡದೆ ಪೊಲೀಸರು ಸಿ.ಟಿ. ರವಿ ರವರನ್ನು ಬಂಧಿಸಿದರು.
ಮಾನ್ಯ ಸಭಾಪತಿಗಳ ರೂಲಿಂಗ್ ಬಳಿಕವೂ ನೋಟಿಸ್ ನೀಡದೆ, ಸಭಾಪತಿಗಳ ಗಮನಕ್ಕೆ ತರದೆ ಪೋಲಿಸ್ ಇಲಾಖೆ ಒತ್ತಡಕ್ಕೆ ಮಣಿದು ನಡೆಸಿದ ಕೃತ್ಯವೂ ವಿಧಾನಪರಿಷತ್ತಿನ ಸದಸ್ಯರ ಹಕ್ಕುಚ್ಯುತಿ ಹಾಗೂ ಸಭಾಪತಿಗಳ ಆದೇಶಕ್ಕೂ ಬೆಲೆ ಕೊಡದೆ ಹಕ್ಕುಚ್ಯುತಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಿಧಾನಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣು ಪಾಲು ಮಾಡಲು ಇಂದಿನ ರಾಜ್ಯ ಸರ್ಕಾರ ಹೊರಟಿದೆ ಎನಿಸುತ್ತದೆ.
ರಾಜಕೀಯ ಷಡ್ಯಂತ್ರ ನಡೆಸಿ ಹಿರಿಯ ಅನುಭವಿ ರಾಜಕಾರಣಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ ರವಿ ರವರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು, ಸಿ.ಟಿ.ರವಿ ಯವರಿಗೆ ರಾತ್ರಿಯಿಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವ ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಯೋಚಿಸುವುದಾದರೆ, ರಾಜ್ಯದಲ್ಲಿ ಜನಸಾಮಾನ್ಯರ ಗತಿ ಏನು? ಎಂಬ ಯಕ್ಷಪ್ರಶ್ನೆ ಮೂಡದೆ ಇರಲಾರದು ಎಂದು ಅವರು ಅಭಿಪ್ರಾಯ ಪಟ್ಟರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
