ಅವನು ಆಂಜನೇಯನ ಭಕ್ತ!
ಪ್ರತಿ ಶನಿವಾರ ಅವನ ಮೈಯಲ್ಲಿ ಆಂಜನೇಯಸ್ವಾಮಿ ಬರ್ತಾನಂತೆ…
ಅವನು… ಅವನು ವಿಚಿತ್ರವಾಗಿ ಕುಣಿಯುತ್ತಿದ್ದಾನೆ.
ಅದೇನೇನೋ ಹೇಳುತ್ತಾ ಮಂಗನಂತೆ ಅತ್ತಿಂದಿತ್ತ ಜಿಗಿದಾಡುತ್ತಿದ್ದಾನೆ.
ಭಕ್ತರು ಭಕ್ತಿಯ ಪರಾಕಾಷ್ಠೆ ತಲುಪಿದ್ದಾರೆ.
ಪರಮ ಭಕ್ತಿಯಿಂದ ಅಡ್ಡ ಬಿದ್ದು ಕೈಜೋಡಿಸಿ ಅವನ ಕಾಲಿಗೆ ನಮಸ್ಕರಿಸುತ್ತಿದ್ದಾರೆ.
ಮತ್ತೊಂದು ದೃಶ್ಯ…
ಅದು ಎಲ್ಲಮ್ಮಳ ದೇವಸ್ಥಾನ!
ಹತ್ತಾರು ಭಕ್ತರು ಅಲ್ಲಿ ಸೇರಿದ್ದಾರೆ.
ಒಬ್ಬ ಮಹಿಳೆಯ ಮೈ ಮೇಲೆ ಎಲ್ಲಮ್ಮ ಬಂದಿದ್ದಾಳೆ.
ಇನ್ನೊಬ್ಬ ಮಹಿಳೆ ಮೈಯಲ್ಲಿ ದೆವ್ವ ಸೇರ್ಕೊಂಡಿದೆ ಅಂತೆ…!
ಅವರಿಬ್ಬರೂ ತಲೆ ಕೂದಲು ಬಿಟ್ಟಿಕೊಂಡು ವಿಚಿತ್ರವಾಗಿ ಆಡುತ್ತಿದ್ದಾರೆ; ವಿಚಿತ್ರವಾಗಿ ವರ್ತಿಸುತ್ತಿದ್ದಾರೆ…
ಏನಿದು ವಿಚಿತ್ರ?
“ಮನುಷ್ಯರ ಮೈ ಮೇಲೆ ದೆವ್ವ, ಭೂತ, ಪ್ರೇತ… ಎಲ್ಲಮ್ಮ, ಹುಲಿಗೆಮ್ಮ, ಆಂಜನೇಯ… ಎಂಬ ಹೆಸರಿನ ದೇವರುಗಳು ಮತ್ತು ದೆವ್ವಗಳು ಬರುವುದು ನಿಜವೇ?”ಎಂದು ಕೇಳಿದರೆ,
“ಹೌದು… ನಿಜ! ಆಂಜನೇಯ ದೇವರು ತುಂಬಾ ಶಕ್ತಿವಂತನು. ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಭೂತ ಪ್ರೇತಗಳು ಹೆದರಿ ಓಡಿ ಹೋಗುತ್ತವೆ. ಹುಲಿಗೆಮ್ಮ, ಎಲ್ಲಮ್ಮ… ಸತ್ಉಳ್ಳ ಮಹಾ ತಾಯಿಂದಿಯರು”ಎಂದು ಹೇಳುವ ಭಕ್ತರು ತಲೆ ಬಿಟ್ಟುಕೊಂಡು ವಿಚಿತ್ರವಾಗಿ ಕುಣಿಯುತ್ತಿರುವ ವ್ಯಕ್ತಿಯ ಪಾದಗಳಿಗೆ ಅಪಾರವಾದ ಭಯ- ಭಕ್ತಿಯಿಂದ ನಮಸ್ಕರಿಸುತ್ತಾರೆ.
ಆದರೆ ಇನ್ನು ಕೆಲವು ಜನ ಭಾರತೀಯರು ಮತ್ತು ವಿದೇಶಿಯರು-
“ವಾಸ್ತವವಾಗಿ ಈ ದೇವರು – ದೆವ್ವ ಇರುವುದಿಲ್ಲ. ಇದ್ದರೂ ಸಹ ಅವುಗಳು ಮನುಷ್ಯರ ಮೈ ಮೇಲೆ ಬರುವುದಿಲ್ಲ. ಅದೊಂದು ಮಾನಸಿಕ ಕಾಯಿಲೆ.ಮೆಂಟಲ್ ಡಿಸ್ಆರ್ಡರ್…! ಇವರುಗಳಿಗೆ ಮಾನಸಿಕ ಚಿಕಿತ್ಸೆಯ ಅವಶ್ಯಕತೆ ಇದೆ.ಸೈಕಾರ್ಟಿಸ್ಟ್ ಹತ್ತಿರ ಕರೆದೊಯ್ದು ಚಿಕಿತ್ಸೆ ಕೊಡಿಸಿ”ಎಂದು ಹೇಳುತ್ತಾರೆ.
ಹಾಗಾದರೆ ಇಲ್ಲಿ ನಿಜ ಯಾವುದು?
ದೇವರು – ದೆವ್ವ ಇದೆಯಾ?
ಇಲ್ಲ-ಇದೆ ಎಂಬುದು ಅವರವರ ಯೋಚನೆ ಮತ್ತು ವಿಚಾರಕ್ಕೆ ಬಿಡುತ್ತೇನೆ.
ಈಗ ಇಲ್ಲಿ ನನಗೆ ತಿಳಿದಿದ್ದನ್ನು, ನನಗೆ ಅನಿಸಿದ್ದನ್ನು ಹೇಳಲು ಪ್ರಯತ್ನಿಸುತ್ತೇನೆ.
ನನ್ನ ಅನಿಸಿಕೆ-
ದೆವ್ವ,ಭೂತ-ಪ್ರೇತ… ಇವುಗಳೆಲ್ಲ ಇರುವುದು ಕಥೆಯೊಳಗೆ, ಸಿನಿಮಾ- ಕಾದಂಬರಿಯೊಳಗೆ! ವಾಸ್ತವವಾಗಿ ದೆವ್ವ ಮತ್ತು ದೇವರುಗಳು ಇರುವುದಿಲ್ಲ.
ಚಿತ್ತ ಭ್ರಮೆ, ಚಿತ್ತ ಚಾಂಚಲ್ಯ, ಚಿತ್ತ ವಿಚಿತ್ರ… ಎಂಬಿತ್ಯಾದಿ 250 ಕ್ಕಿಂತಲೂ (ಅಧಿಕ) ಹೆಚ್ಚು ಮಾನಸಿಕ ಕಾಯಿಲೆಗಳು ಇವೆಯೆಂದು ಹೇಳಲಾಗಿದೆ.
ಇದು ಕೂಡ ಅವುಗಳಲ್ಲಿ ಒಂದು.
೧.ಕತ್ತಲೆಯ ರಾತ್ರಿಯಲ್ಲಿ ಭಯದಿಂದ ಹೆದರುತ್ತಾ ಮನೆಗೆ ಮರಳುತ್ತಿರುವಾಗ, ಹೊಳೆಯ ಹತ್ತಿರ ಬಂದಾಗ ಅಲ್ಲಿದ್ದ ಹುಣಸೆ ಮರದಲ್ಲಿ ಅಡಗಿದ್ದ ದೆವ್ವ ಎದುರಾಗುತ್ತದೆ. ಮರುದಿನ ಜ್ವರ ಬರುತ್ತದೆ. ದೆವ್ವ ಮೆಟ್ಟಿಕೊಂಡಿರುತ್ತದೆ. ಆಸ್ಪತ್ರೆಗೆ ಹೋದರೂ ಸಹ ಜ್ವರ ಕಡಿಮೆಯಾಗುವುದಿಲ್ಲ. ಮಾತ್ರಿಕ ಬಾಬನ ಬಳಿ ಹೋದಾಗ ತಾಯಿತ ಕಟ್ಟಲಾಗುತ್ತದೆ. ಮಂತ್ರಿಸಿದ ನಿಂಬೆ ಹಣ್ಣು ತಿನ್ನಿಸಲಾಗುತ್ತದೆ…ಇತ್ಯಾದಿ ಭೂತ-ಪ್ರೇತಗಳ ಕಾರ್ಯ ಮಾಡಿ ದೆವ್ವವನ್ನು ಓಡಿಸಲಾಗುತ್ತದೆ.
೨.ಹೆರಿಗೆಗೆಂದು ತವರಿಗೆ ಬಂದ ತನ್ನ ಹೆಂಡತಿ ಮತ್ತು ತನ್ನ ಮಗುವನ್ನು ಕಾಣುವ ತೀವ್ರವಾದ ಬಯಕೆಯಿಂದ ಕುಡುಕ ಬಲಭದ್ರ ಕುಡಿತದ ಮತ್ತಿನಲ್ಲಿ ತೂರಾಡುತ್ತ ನಡೆದುಕೊಂಡು ಬರುತ್ತಿದ್ದಾನೆ.
ಗವ್ ಎನ್ನುವ ಅಮಾವಾಸ್ಯೆಯ ಕಗ್ಗತ್ತಲೆ
ಕವಿದಿದೆ.
ಗಾಳಿ ಬೀಸುತ್ತಿದೆ.
ರಭಸವಾಗಿ ಮಳೆ ಬರುತ್ತಿದೆ. ಪ್ರಕೃತಿ ಆರ್ಭಟಿಸುತ್ತದೆ!
ಮಿಂಚು… ಗುಡುಗು!
ಭಯ ಹುಟ್ಟಿಸುವ ಪ್ರಕೃತಿ ಆರ್ಭಟದಲ್ಲಿ… ಕುಡಿತದ ಮತ್ತಿನಲ್ಲಿ ತೂರಾಡುತ್ತ ಮನೆಗೆ ಬಂದ ಗಂಡನನ್ನು ಕಂಡು ಭಯ- ಆಶ್ಚರ್ಯದಿಂದ ಕೇಳಿದಳು ಕಮಲ-
“ಹೊಳೆ ತುಂಬಿ ಹರಿತೈತಿ. ಅಮಾವಾಸ್ಯೆ ಕತ್ತಲು ಬೇರೆ ಐತಿ.ಹೊಳೆ ಪಕ್ಕದಲ್ಲಿರುವ ಆ ದೊಡ್ಡ ಹುಣಸೆ ಮರದಲ್ಲಿ ಪುರಾತನ ಕಾಲದ ಗಡ್ಡ ಬಿಟ್ಕೊಂಡಿರುವ ಕೊಳ್ಳಿ ದೆವ್ವ ಐತಿ ಅಂತ ಹೇಳ್ತಾರೆ. ಇಂಥ ಕತ್ತಲದ ಮಳೆಯಾಗ ನೀ ಹೆಂಗ್ ಬಂದಿಯೋ ನನ್ ರಾಜಾ…?”ಎಂದು ಭಯ-ಆತಂಕ ಮತ್ತು ಕಳವಳದಿಂದ ಕೇಳಿದಳು.
ಆಗ ಅದಕ್ಕೆ-
“ನಿನ್ ನೋಡೋ ಆಸೆಯ ಆತುರದಲ್ಲಿ ನಂಗೆ ಈ ಕತ್ತಲೆಯ ಮಳೆ,ಆ ಹೊಳೆ ದಂಡೆಯ ದೆವ್ವ.. ಇದು ಯಾವುದೂ ಸಹ ನನ್ನ ಗಮನಕ್ಕೆ ಬರಲೇಇಲ್ಲ ಕಮಲಿ. ಅದ್ಸರಿ, ನನ್ ಮಗ ಎಲ್ಲಿ?”ಎಂದು ಕೇಳುತ್ತಾ ಅಲ್ಲಿ ತೊಟ್ಟಲಲ್ಲಿ ಮಲಗಿದ್ದ ತನ್ನ ಮಗುವನ್ನೆತ್ತಿಕೊಂಡು ಖುಷಿಯಿಂದ ಮಗುವನ್ನು ಮುದ್ದಾಡಲಾರಂಭಿಸಿದನು ಬಲಭದ್ರ.
ದೆವ್ವ ಇದೆ ಎಂಬ ಭಯದಿಂದ ಹೆದರುತ್ತಾ ಬಂದ ವ್ಯಕ್ತಿಗೆ ದೆವ್ವ ಕಾಣಿಸಿಕೊಳ್ಳುತ್ತದೆ. ದೆವ್ವ ಮೆಟ್ಟಿಕೊಂಡು ಜ್ವರ ಬರುತ್ತದೆ.
ದೆವ್ವದ ಕಲ್ಪನೆ ಇಲ್ಲದೆ ಹೆಂಡತಿ ಮತ್ತು ತನ್ನ ಮಗುವನ್ನು ಕಾಣುವ ಹೆಬ್ಬಯಕೆಯಿಂದಾಗಿ ಕುಡಿತದ ಮತ್ತಿನಲ್ಲಿ ತುರಾಡುತ್ತ ಬಂದ ವ್ಯಕ್ತಿಗೆ ದೆವ್ವ ಸಿಗುವುದಿಲ್ಲ….
ಭೂತ-ಪ್ರೇತ ದೆವ್ವ- ದೇವರು. ಇದೆಲ್ಲಾ ಅವರವರ ಮನಸ್ಸಿಗೆ ಸಂಬಂಧಿಸಿದ
ಭಯಂಕರವಾದ ಮಾನಸಿಕ ರೋಗವೇ ಆಗಿದೆ; ಬೇರೇನೂ ಅಲ್ಲ! ಎಂಬ ಅನಿಸಿಕೆ ನನ್ನದು…
- ಜಿ ಎಲ್ ನಾಗೇಶ್
