ಹನೂರು – ಅರಣ್ಯ ಇಲಾಖೆಯ ಸಹಕಾರದಿಂದ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಪಡಿಸುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಲಿಂಗಂ ತಿಳಿಸಿದರು.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಕೋಣನಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅರಣ್ಯ ಹಕ್ಕು ಕಾಯ್ದೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ಪಂಚಾಯತಿ ಅಧಿಕಾರಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಈಗಾಗಲೇ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಂತಹ ಕೆಲಸ ಮಾಡಲಾಗುವುದು.
ಕೋಣನಕೆರೆ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಹಾಗೂ ಇಲ್ಲಿ ವಾಸಿಸುವ ಜನರಿಗೆ ಬೇಕಾದಂತಹ ನಿವೇಶನ, ನೀರಿನ ವ್ಯವಸ್ಥೆ ಚರಂಡಿ ಹೂಳು ತೆಗೆಸುವುದು. ಬೀದಿ ದೀಪ ಅಳವಡಿಸುವುದು ಸೇರಿದಂತೆ ಇಲ್ಲಿನ ಜನರು ತಿಳಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆದಿವಾಸಿ ಜನರಿಗೆ ಸರ್ಕಾರದ ಯೋಜನೆಗಳು ಸಿಗಬೇಕು:
ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಕ್ಯಾಬಿನೆಟ್ ಸಭೆ ನಡೆಸುವುದರಿಂದ. ಬುಡಕಟ್ಟು ಜನಾಂಗದ ವಾಸ್ತವ ಸ್ಥಿತಿಗತಿ ಹೇಗಿದೆ ಅವರಿಗೆ ಬೇಕಾದಂತ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದ್ದಾರೆ.
ಆದಿವಾಸಿ ಜನರಿಗೆ ಸರ್ಕಾರದ ಯೋಜನೆಗಳು ಸಿಗಬೇಕು ಎಂಬ ಮನವಿಯನ್ನು ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಆದಿವಾಸಿ ಜನರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಚಿವ ಸಂಪುಟದಲ್ಲಿ ಬಗೆಹರಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ಆರ್.ಎಫ್.ಒ ಪ್ರವೀಣ್ ಪಿ.ಈ ಅವರು ಮಾತನಾಡಿ ಇತರೆ ಪಾರಂಪರಿಕ ಹಕ್ಕಿನಡಿ ಮೂರು ಫಲಾನುಭವಿಗಳು ಪರಿಶೀಲನೆ ಮಾಡಿಸಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು
ನಾಲ್ ರೋಡ್, ಕೋಣನಕೆರೆ ಆದಿವಾಸಿಗಳ ಸ್ಥಳ ಪರಿಶೀಲನೆ ನಡೆಸಲಾಗುವುದು. ಹೊಸದಾಗಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಲಾಗುವುದು ಎಂದು ತಿಳಿಸಿದರು.
ಕೋಣನಕೆರೆ ಆದಿವಾಸಿಗಳಿಗೆ ಪುನರ್ವಸತಿ ಯೋಜನೆಯಡಿ ಮಂಜೂರಾಗಿದ್ದ ವ್ಯವಸಾಯ ಜಮೀನು ನೀಡುವಂತೆ ಅರಣ್ಯ ಹಕ್ಕು 2006 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು. ನಾಲ್ಕೈದು ಗ್ರಾಮ ಸಭೆಗಳು ನಡೆದಿದ್ದು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ 30 ಕುಟುಂಬಗಳಿಗೆ ಎರಡು ಕರೆಯಂತೆ ಅರವತ್ತು ಎಕ್ಕರೆಷ್ಟು ಜಮೀನು ಇರುವುದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ಕೊಡಬೇಕೆಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸಂಯೋಜಕ ಮಹಾದೇವಸ್ವಾಮಿ ದೂರು ನೀಡಿದರು.
ಕೋಣನಕೆರೆ ಆದಿವಾಸಿಗಳ ದೂರು:
ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣ, ಬೋರ್ವೆಲ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸುವುದು. ಜಮೀನುಗಳ ಮೂಲಕ ಸಂಪರ್ಕ ರಸ್ತೆಯನ್ನು ನರೇಗಾ ಯೋಜನೆಅಡಿ ಅಭಿವೃದ್ಧಿ ಪಡಿಸುವುದು. ಸ್ಮಶಾನಕ್ಕೆ ಜಾಗ ಮಂಜೂರು ಮಾಡುವುದು. ನಿವೇಶನ ವಂಚಿತರಿಗೆ ನಿವೇಶನ ಹಕ್ಕು ಪತ್ರ ಮಂಜೂರು ಮಾಡುವುದು.
ಚರಂಡಿ ಹೂಳು ತೆಗೆಸುವುದು. ಗ್ರಾಮದ ಮೂಕಳ್ಳಿ ಮಾರಮ್ಮ, ಜಡೆಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದು. ಸಮುದಾಯ ಹಕ್ಕಿನಲ್ಲಿ ಆಟದ ಮೈದಾನ ಮಂಜೂರು ಮಾಡುವುದು. 60 ಜನರಿಗೆ ಜಮೀನು ನೀಡುವುದು. ಹಾಗೂ ಗ್ರಾಮದಲ್ಲಿ ಸಾರಿಗೆ ಬಸ್ ಗಳು ನಿಲ್ಲಿಸಬೇಕು ಎಂದು ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಮಾಪುರ ವನ್ಯಜೀವಿ ವಲಯ ಅಧಿಕಾರಿ (ಆರ್.ಎಫ್.ಓ) ಪ್ರವೀಣ್ ಪಿ.ಈ, ಆಶ್ರಮ ಶಾಲೆ ಮುಖ್ಯ ಶಿಕ್ಷಕ ಅಂಕಪ್ಪ, ಗ್ರಾಮ ಪಂಚಾಯತ್ ಪಿಡಿಒ ಶಿವಣ್ಣ, ಅಧ್ಯಕ್ಷ ಇನ್ನಾಸಿಮತ್ತು, ಕಾರ್ಯದರ್ಶಿ ನಾಗರಾಜು, ಸದಸ್ಯೆ ಪ್ರಭಾವತಿ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಪುಟ್ಟಮಾದ, ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸಂಯೋಜಕ ಮಹಾದೇವಸ್ವಾಮಿ ಜೆ. ಬಿಟ್ ಫಾರೆಸ್ಟ್ ಕಲ್ಮೇಶ ತುರುಮುರಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
