ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಮಲೆ ಮಹಾದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಮತ್ತು ಸ್ವಚ್ಛತಾ ಕಾರ್ಯಗಳನ್ನು ಶಾಸಕ ಎಂ. ಆರ್.ಮಂಜುನಾಥ್ ಪರಿಶೀಲಿಸಿದರು.
ಬೆಳೆಗ್ಗೆ ಮಲೆಮಹದೇಶ್ವರ ಸ್ವಾಮಿಯ ದರ್ಶನ ಪಡೆದ ಬಳಿಕ ಅಧಿಕಾರಿಗಳೋಡನೆ ಪರಿಶೀಲನೆಗೆ ತೆರಳಿದ ಅವರು ಚೆಕ್ ಪೋಸ್ಟ್ ಮೂಲಕ ಶ್ರೀ ಕ್ಷೇತ್ರಕ್ಕೆ ಹೋಗುವ ಎರಡು ಬದಿಯ ಸಿ.ಸಿ.ರಸ್ತೆ ಚರಂಡಿಗಳ ಕಾಮಗಾರಿಗಳು ಮತ್ತು ಶುಚಿತ್ವ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ ವಸತಿ ಗೃಹ ಬಳಿಯ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ವಾಹನಗಳ ಪಾರ್ಕಿಂಗ್ ಸ್ಥಳ, ಹಸಿರು ವನ ಪರಿಶೀಲನೆ ನಡೆಸಿದರು. ಅಲ್ಲಿ ಕಂಡ ಅಶುಚಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಲಾಖೆಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ನಾನು ಪ್ರತಿ ಬಾರಿ ಹೇಳಬೇಕೇ ಮತ್ತೆ ಬರುತ್ತೇನೆ ಅಲ್ಲಿಯವರೆಗೆ ಶುಚಿತ್ವದಿಂದ ಕೂಡಿರಬೇಕೆಂದು ಎಚ್ಚರಿಸಿದರು. ಸ್ಥಳದಲ್ಲಿಯೇ ಇದ್ದ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಈಗಿರುವ ಸ್ವಚ್ಚದ ಸಿಬ್ಬಂದಿಗಳ ಜೊತೆ ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು ನಿಯೋಜಿಸಿ ಎಂದು ಸೂಚಿಸಿದರು.
ಇನ್ನೂ ಪಾದರಕ್ಷೆಗಳನ್ನು ಬಿಡುವ ಹಿಂಬದಿಯ ಸ್ಥಳ, ಡಾರ್ಮೆಂಟರಿ ಸುತ್ತಮುತ್ತ ಅಲ್ಲಲ್ಲಿ ಗಲೀಜು ಮಾಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲವೇ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಸಿಬ್ಬಂದಿಗಳನ್ನು ಹಾಕಿ ಮೂತ್ರ ವಿಸರ್ಜನೆ ಮಾಡದಂತೆ ಕ್ರಮವಹಿಸಬೇಕು ಎಂದರು.
ದೊಡ್ಡಕೆರೆ ಸುತ್ತಮುತ್ತ ಅನೈರ್ಮಲ್ಯ ತಡೆಗಟ್ಟಿ:
ದೊಡ್ಡಕೆರೆ ಅಭಿವೃದ್ಧಿ ಕಾರ್ಯ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕೆರೆಯ ಸುತ್ತ ಅತ್ಯಂತ ಅಸಹನೀಯ ಗಲೀಜು ಗಿಡಗಂಟಿಗಳಿಂದ ಕೂಡಿರುವುದನ್ನು ಕಂಡು ದೇವಾಲಯದ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಮಹೇಶ್, ಎಸ್.ಟಿ ಪಿ. ವಿನೋದ್ ಮತ್ತು ಗುತ್ತಿಗೆದಾರರನ್ನು ಕರೆದು ನೀವು ಏನೂ ಮಾಡುತ್ತಿರೋ ಗೊತ್ತಿಲ್ಲ ಒಳಚರಂಡಿ ಪೈಪ್ ಲೈನ್, ರಸ್ತೆ ಇನ್ನಿತರೆ ನಿಮ್ಮ ವ್ಯಾಪ್ತಿಯ ಕೆಲಸಗಳನ್ನು ಮಾಡುವ ಮೂಲಕ ಶುಚಿತ್ವ ಕಾಪಾಡಬೇಕು ಎಂದರು.
ಬಳಿಕ ವಾಣಿಜ್ಯ ಮಳಿಗೆಗಳ ಎದುರಿಗೆ ಇರುವ ಸಾರ್ವಜನಿಕರ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ, ದೀಪದ ಗಿರಿ ಒಡ್ದುವಿನ ಅಭಿವೃದ್ಧಿ ಕಾಮಗಾರಿ, 512 ಕೊಠಡಿಗಳ ಬೃಹತ್ ಕಟ್ಟಡದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.
ವರದಿ: ಉಸ್ಮಾನ್ ಖಾನ್
