ಅನಾದಿಯಲ್ಲಿ ಈ ಬ್ರಹ್ಮಾ೦ಡ ಆದಿ ಮಾಯೆ ಜಗನ್ಮಾತೆ ಯಿಂದ ಸೃಷ್ಟಿ ಆಯಿತೆಂದು ಶ್ರೀ ದೇವಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಆ ನಂಬಿಕೆಯನ್ನು ಪ್ರಸ್ತುತವಾಗಿಡಲು ಕರಾವಳಿ ಭಾಗದಲ್ಲಿ ಯಕ್ಷಗಾನ ಪುಣ್ಯ ಕಥಾ ಭಾಗದಿಂದ ಆಡಿ ತೋರಿಸಲಾಗುತ್ತದೆ. ಈಗ ವಿಷಯಕ್ಕೆ ಬರುವುದಾದರೆ ನಾವು ಜನ್ಮವೆತ್ತಿದ ಭೂಮಿ ತಂದೆಯದ್ದೋ ಅಥವಾ ತಾಯಿಯದ್ದೋ ?
ಕರಾವಳಿ ಭಾಗದ ತುಳು ಭಾಷೆಯಲ್ಲಿ ಭೂಮಿಯನ್ನು “ಭೂ ತಾಯಿ ” ಎಂದು ಸಂಭೋದಿಸಲಾಗುತ್ತದೆ. ಜಗತ್ತಿನ ಯಾವುದೇ ದೇಶದವರೂ ತಮ್ಮ ದೇಶವನ್ನು “ಮದರ್ ಲ್ಯಾಂಡ್ ” ಎಂದು ಗೌರವಿಸುತ್ತಾರೆ. ನಮ್ಮೀ ಭಾರತವನ್ನು “ಭಾರತ ಮಾತೆ ” ಯಾಗಿ ಪೂಜಿಸುತ್ತೇವೆ. ಭಾರತ್ ಮಾತಾಕಿ ಜೈ ಅನ್ನುತ್ತೇವೆ.
ಇಷ್ಟೆಲ್ಲಾ ಸಾಕ್ಷ್ಯಗಳಿರುವಾಗ ಭೂಮಿ ಯಾವತ್ತೂ ತಂದೆಯದ್ದಲ್ಲ, ಅದು ತಾಯಿ ನಮಗೆ ಯಾವ ಊರಿನಲ್ಲಿ ಜನ್ಮ ಕೊಟ್ಟು, ಭೂಮಿ ಮೇಲೆ ಪಾದಾರ್ಪಣೆ ಮಾಡುತ್ತೇವೆಯೋ ಆ ಭೂಮಿ ಮತ್ತು ಆ ಹೆಸರು ಹೊಂದಿರುವ ಊರೇ ನಮ್ಮ ಹುಟ್ಟೂರಾಗಿರುತ್ತದೆ. ಅದನ್ನೇ ಪ್ರಭು ಶ್ರೀ ರಾಮಚಂದ್ರ ಹೇಳಿರುವುದು ” ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂದರೆ ಹೆತ್ತ ತಾಯಿ, ಹೊತ್ತ ಭೂಮಿ ಸ್ವರ‍್ಗಕ್ಕಿಂತಲೂ ಮಿಗಿಲು.
ಅಧಿಕಾರ ಕಸದ ತೊಟ್ಟಿಗೆ ಸೇರುವ ಕಸ ಕಡ್ಡಿಯಂತೆ, ಆದರೆ ನಾವು ಹುಟ್ಟಿದ ಊರಿನ ಬಗ್ಗೆ ಅಭಿಮಾನ ಇದ್ದರೆ, ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.
ಗತಕಾಲದ ಹಳ್ಳಿಗಳು ಆಧುನಿಕತೆಯ ಪ್ರಭಾವದಿಂದ ಅಭಿವೃದ್ಧಿ ಹೊಂದಿ ನಗರಗಳಾಗಿ ಪರಿವರ್ತನೆ ಗೊಳ್ಳುತ್ತಿವೆ. ತಮ್ಮ ಹುಟ್ಟಿನಿಂದ ಬೆಳೆದು ಬಂದ ಗ್ರಾಮಸ್ಥರಿಗೆ, ತಮ್ಮ ಊರಿನ ಬಗ್ಗೆ ಅಭಿಮಾನ ಸ್ವಾಭಾವಿಕ. ಹಾಗಾಗಿ ಅಭಿಮಾನ ಮತ್ತು ಸ್ವಾಭಿಮಾನಕ್ಕೆ, ಊರಿಗೆ ವಲಸೆ ಬಂದವರಿಂದ ದಕ್ಕೆ ಆದಾಗ ಹೋರಾಡುವುದು ಮನುಷ್ಯ ಸ್ವಭಾವ.
ಬೇರೆ ಊರಿಂದ ವಲಸೆ ಬಂದು ಹೊಸ ಊರಲ್ಲಿ ನೆಲೆಸುವವರು, ಹೊಸ ಊರ ಜನರೊಂದಿಗೆ ಬೆರೆತು ಅರ್ಥ ಮಾಡಿಕೊಳ್ಳಬೇಕು, ಮೂಲದಿಂದ ವಾಸ ಆಗಿರುವವರ ಬಗ್ಗೆ ಸ್ನೇಹ ಮತ್ತು ಗೌರವ ಯುತವಾಗಿ ನಡೆದು ಕೊಳ್ಳಬೇಕು, ಹುಟ್ಟು ಸಹಜ ಬೆಳೆದವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಾಲಕ್ರಮೇಣ ವಲಸೆ ಬಂದವರೂ ಆ ಊರಿನವರಂತೆ ಹೊಂದಿಕೊಂಡು ಬದುಕಲು ಕಲಿಯಬೇಕು. ಆಗ ಶಾಂತಯುತ ಸಮಾಜ ನಿರ್ಮಾಣ ಆಗಲು ಸಾಧ್ಯ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವ ಸಮಾಜ, ಹಿರಿಯರು ಬಾಳಿದ ರೀತಿಯನ್ನು ಮರೆತು, ಗೌರವಿಸದೆ ತಮ್ಮ ಇಚ್ಚಾನುಸಾರ ಮಾತು ಮತ್ತು ಕೃತಿಗಳಲ್ಲಿ ತೊಡಗಿದ್ದಾರೆ. ತಮ್ಮ, ತಮ್ಮ ಸಮೂಹ ಕಟ್ಟಿಕೊಂಡು ಹಳ್ಳಿಗಳಲ್ಲಿ ತುಂಡು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಊರು, ರಾಜ್ಯ ,ದೇಶದ ಇತಿಹಾಸವನ್ನು ಮರೆತವರು ಊರು, ರಾಜ್ಯ , ದೇಶ ಕಟ್ಟಲು ಎಂದಿಗೂ ಸಾಧ್ಯವಿಲ್ಲ.
“ಇಂದಿನ ಯುವಕರೇ ಮುಂದಿನ ಜನಾ೦ಗ ” ಎಂಬ ಧ್ಯೇಯ ವಾಕ್ಯ ನಮ್ಮ ಮುಂದಿನ ಪೀಳಿಗೆಗೆ ಅನ್ವಯಿಸುವಂತೆ ಕಾಣುತ್ತಿಲ್ಲ. ಆಧುನಿಕತೆಯ ನಶೆಯಲ್ಲಿ ನಮ್ಮ ಸಾವಿರಾರು ವರ್ಷದ ಇತಿಹಾಸಕ್ಕೆ ನಮ್ಮ ಯುವ ಜನತೆ ತಿಲಾಂಜಲಿ ಬಿಡುವ ಎಲ್ಲ ಸನ್ನಿವೇಶಗಳು ಗೋಚರಕ್ಕೆ ಬರುತ್ತಿವೆ.
ಊರು ಅಪ್ಪನದ್ದಲ್ಲ , ಅಮ್ಮನದ್ದು. ಸಂತಾನ ಅಪ್ಪನದ್ದಿರಬಹುದು, ಜನ್ಮ ಕೊಡುವುದು ತಾಯಿಯೇ. ” ಕೃಷ್ಣ ಹುಟ್ಟಿದ್ದು ಮಥುರೆಯಲಿ , ಬೆಳೆದದ್ದು ಗೋಕುಲದಲ್ಲಿ ” ಆದುದರಿಂದ ಯಾವುದೇ ಮನುಷ್ಯನ ಹುಟ್ಟಿದ ಊರು ಅವನ ಹೆಸರಿನ ಜೊತೆ ಸೇರಿಕೊಳ್ಳುತ್ತದೆ. ಅದು ಆ ಮನುಷ್ಯನ ಗುರುತು ಕೂಡಾ ಆಗಿರುತ್ತದೆ. ಕರಾಚಿಯಲ್ಲಿ ಹುಟ್ಟಿದವ ಭಾರತದ ಯಾವುದೇ ಹಳ್ಳಿಯವ ಆಗಿರಲು ಸಾಧ್ಯವಿಲ್ಲ, ಹಾಗೆ ಆಗಿದ್ದರೆ ಅಲ್ಲಿ ಅಕ್ರಮ ಆಗಿರುವ ಎಲ್ಲಾ ಸಾಧ್ಯತೆಗಳಿವೆ. ಕೇರಳ , ತಮಿಳುನಾಡಿನಲ್ಲಿ ಹುಟ್ಟಿದವ ಕರ್ನಾಟಕದಲ್ಲಿ ಅಥವಾ ಬೇರೆ ರಾಜ್ಯದಲ್ಲಿ ನೆಲೆಸಿದರೆ, ಕಾಲಕ್ರಮೇಣ ವ್ಯಕ್ತಿಯ ಗುಣ ನಡತೆ ನೋಡಿ ಕರ್ನಾಟಕದ ಅಥವಾ ದೇಶದ ಯಾವುದೇ ರಾಜ್ಯದ ಜನತೆ ಮತ್ತು ಆಡಳಿತ ಅವರನ್ನು ತಮ್ಮವರನ್ನಾಗಿ ಸ್ವೀಕರಿಸುತ್ತಾರೆ. ಉದಾಹರಣೆಗೆ ದಕ್ಷಿಣ ಕನ್ನಡದ ತುಳುವರು ಮಹಾರಾಷ್ಟ್ರ ರಾಜ್ಯದ ಮುಂಬೈ ಮತ್ತು ಇತರ ನಗರಗಳಲ್ಲಿ ಹಲವಾರು ವರ್ಷಗಳ ಹಿಂದೆ ಕೆಲಸ ಹುಡುಕುತ್ತಾ ಹೋದವರು ತಮ್ಮ ಬದುಕು ಕಟ್ಟಿಕೊಂಡು ಯಶಸ್ವಿ ಉದ್ಯೋಗಿಗಳು , ಉದ್ಯಮಿಗಳು, ಹಿಂದಿ ಚಲನ ಚಿತ್ರ ನಟ , ನಟಿಯರಾಗಿ , ರಾಜಕಾರಣಿಗಳಾಗಿದ್ದಾರೆ. ಕಣ, ಕಣದಲ್ಲಿ ಶಿವಾಜಿಯ ಚಿಂತನೆ ಇರುವ ಮರಾಠಿಗಳು ತುಳುವರನ್ನು ತಮ್ಮವರಾಗಿ ಒಪ್ಪಿಕೊಂಡು ಮಹಾರಾಷ್ಟದಲ್ಲಿ ಹೆಮ್ಮೆಯಿಂದ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಅದಕ್ಕೆ ನಮ್ಮವರ ಹೊಂದಿಕೊಳ್ಳುವ ಗುಣವೇ ಮೂಲ ಕಾರಣ. ಇದೇ ಆದರ್ಶವನ್ನು ಅನುಸರಿಸಿ ಕರ್ನಾಟಕದಲ್ಲಿ ನೆಲೆಕಂಡಿರುವ ಪರ ಊರಿನವರು , ಹೊರ ರಾಜ್ಯ ದವರು ನಮ್ಮ ರಾಜ್ಯಕ್ಕೆ ಬಂದಾಗ ಮೊದಲು ನಮ್ಮ ಜೀವನ ಶೈಲಿಯನ್ನು ಅರ್ಥ ಮಾಡಿಕೊಂಡು, ನಮ್ಮ ತನಕ್ಕೆ ಬೆಲೆಕೊಟ್ಟು, ನಮ್ಮೊಂದಿಗೆ ಸಮಾಜದಲ್ಲಿ ಬದುಕುವುದನ್ನು ಕಲಿಯಬೇಕು, ಅದನ್ನು ಬಿಟ್ಟು ಉದ್ದಟತನ ತೋರಿ, ಕ್ಯಾತೆಗಿಳಿದು, ಈ ಊರು ನಿನ್ನಪ್ಪನದಾ ಎಂದು ಪ್ರಶ್ನಿಸುವ ಅಹಂಕಾರ ಮಾಡಬಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ, ನಮ್ಮವರಲ್ಲೇ ಭಿನ್ನಾಭಿಪ್ರಾಯ ಹುಟ್ಟುಹಾಕಿ ತನ್ನ ಪ್ರಾಭಲ್ಯ ಮೆರೆಯಲು ಹೋದರೆ, ನಮ್ಮ ಸಮಾಜ ಒಟ್ಟಾಗಿ ಅಂಥ ಘಾತುಕರನ್ನು ಮಟ್ಟಹಾಕಲಿದ್ದಾರೆ, ಸಮಯವೇ ಅವರಿಗೆ ಉತ್ತರಿಸಲಿದೆ.
ಲೇಖನ : ಚಂದ್ರಶೇಖರ ಹೆಬ್ಬಾರ್ ಕೊಲ್ಯ
