ವಿಜಯನಗರ/ ಕೊಟ್ಟೂರು : ತಾಲೂಕು ಕಛೇರಿಗಳ ಭೂ-ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಶಾಶ್ವತವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಸುಲಭ ಮತ್ತು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ತಾಲೂಕು ಕಛೇರಿಗಳ ಅಭಿಲೇಖಾಲಯದ ಭೂದಾಖಲೆಗಳ ಡಿಜಿಟಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಆರಂಭಿಸಿರುವ ಮಹತ್ವಕಾಂಕ್ಷಿ ಯೋಜನೆಯಾದ “ಭೂ ಸುರಕ್ಷಾ ಯೋಜನೆ” ಪ್ರಾರಂಭಿಸಲಾಗಿದೆ.
ಸದರಿ ವ್ಯವಸ್ಥೆಯಿಂದ ಹಳೆಯ ದುಸ್ಥಿತಿಯಲ್ಲಿರುವ ದಾಖಲೆಗಳ ಸಂರಕ್ಷಣೆ ಮಾಡುವುದರ ಜೊತೆಗೆ ದಾಖಲೆಗಳು ಕಳವಾಗಲು, ತಿದ್ದಲು ಅಸಾಧ್ಯವಾಗುವುದರ ಜೊತೆಗೆ ರೆಕಾರ್ಡ್ ರೂಂ ಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆಯಾಗಲಿದೆ.
ಇಂತಹ “ಭೂ-ಸುರಕ್ಷಾ ಯೋಜನೆ”ಯಾದ ರೆಕಾರ್ಡ್ ರೂಂನ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಕೊಟ್ಟೂರು ತಾಲೂಕು ಕಛೇರಿಯಲ್ಲಿ 09.01.2025ರಂದು ಪ್ರಾರಂಭಿಸಲಾಗಿದ್ದು, ಈ ಕಾರ್ಯದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ನೇಮಿರಾಜ ನಾಯ್ಕ ಮಾನ್ಯ ಶಾಸಕರು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಿದರು. ಈ ಸಮಯದಲ್ಲಿ ನಂದಿಪುರ ಪುಣ್ಯ ಕ್ಷೇತ್ರದ ಪೂಜ್ಯರಾದ ಡಾ. ಮಹೇಶ್ವರ ಸ್ವಾಮೀಜಿಯವರು, ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಜಿ ಪಂ ಸದಸ್ಯರಾದ ಎಂ.ಎಂ.ಜೆ.ಹರ್ಷವರ್ಧನ್, ತಹಶೀಲ್ದಾರರಾದ ಅಮರೇಶ್ ಜಿ.ಕೆ. ಗ್ರೇಡ್-2 ತಹಶೀಲ್ದಾರ್ ಪ್ರತಿಭಾ ಎಂ. ಶಿರಸ್ತೇದಾರ್ ರೇಖಾ ಹಾಗೂ ಗುತ್ತಿಗೆದಾರರು ಕಂಪ್ಯೂಟರ್ ಆಪರೇಟರ್ ಗಳು ಉಪಸ್ಥಿತರಿದ್ದರು.
ವರದಿಗಾರ – ಚಂದ್ರಗೌಡ
