ಬೆಂಗಳೂರು : ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಡಾ. ಡಿ ಎಂ ಹೆಗಡೆ ಅವರು ಮಾತನಾಡುತ್ತಾ ಈ ಭೂಮಿಗೆ ನಾವೆಲ್ಲಾ ಆಗಂತುಕರು, ಒಂದು ದಿನ ಹೋಗಲೇಬೇಕು. ಹಿಂದೆಯೂ ಬಹಳ ಜನ ಆಗಿ ಹೋಗಿದ್ದಾರೆ, ಮುಂದೆಯೂ ಹೋಗಲಿದ್ದಾರೆ. ಅಂದಮೇಲೆ ಈ ಬದುಕಿಗೆ ಅಗತ್ಯಕ್ಕಿಂತ ಹೆಚ್ಚಿನದಕ್ಕೆ ಆಶಿಸುವುದು ಯಾಕೆ? ಆಶಿಸುವುದೇ ದುಃಖ ನೋವು,ರೋಗಗಳಿಗೆ ಆಹ್ವಾನ ನೀಡಿದಂತೆ.
ಇಲ್ಲಿ ಯಾರೂ ಒಂಟಿಯಾಗಿ ಬದುಕಲಾರ.
ಮೊದಲಿಗೆ ನಾನು ನನ್ನನ್ನು ಪ್ರೀತಿಸಿದರೆ ನಾನು ಸಮಾಜವನ್ನು ಪ್ರೀತಿಸಲು ಸಾಧ್ಯ. ಅವರಿಂದಲೇ ಸ್ವ ಉನ್ನತಿ-ಸಮಾಜದ ಉನ್ನತಿ. ನೋವಿನ ಘಟನೆಗಳನ್ನು ಮರೆಯಲಿಕ್ಕಾದರೂ ಧ್ಯಾನ ಮಾಡಬೇಕು,
ಆಗಲೇ ನಾವು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿ ನಮಗೆ ನಾವು ಇಷ್ಟವಾಗಬೇಕು, ನಾವು ನಮ್ಮನ್ನು ಪ್ರೀತಿಸಿದರೆ ಸುಖ, ನೆಮ್ಮದಿ ಸುಲಭ ಎಂದು ಮಾರ್ಮಿಕವಾಗಿ ನುಡಿದರು. ಅವರ ಪಾಂಡಿತ್ಯ ಪೂರ್ಣ ಮನೋವೈಜ್ಞಾನಿಕ ವಿಶ್ಲೇಷಣೆ ಸಭಿಕರು ತಲೆದೂಗುವಂತೆ ಮಾಡಿತು. ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ಸೂಚಿಸಿದರು.
ನಂತರ ನಡೆದ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಬಹುಭಾಷಾ ತಜ್ಞೆ, ಖ್ಯಾತ ಅನುವಾದಕಿ, ನಿವೃತ್ತ ಪ್ರಾಂಶುಪಾಲೆ ಎಂ ಆರ್ ಕಮಲ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,
ಕವಿ ಒಬ್ಬ ವಿಶೇಷ ಜೀವಿ.
ಯಾರಿಗೆ ಕಾರಣ ಮತ್ತು ಅಂತಃಕರಣ ಜಾಗೃತವಾಗಿರುತ್ತದೆಯೋ ಅವರು ಕವಿತೆ ಬರೆಯುತ್ತಾರೆ. ಕಾರಣ ಮಾತ್ರ ಎಲ್ಲರಿಗೂ ಜಾಗೃತವಾಗಿರುತ್ತದೆ; ಆದರೆ ಒಳಗಿನ ಅಂತಃಕರಣ ಜಾಗೃತನಾದವನು ಕವಿತೆ ಬರೆದು ಕವಿಯಾಗುತ್ತಾನೆ.
ಕವಿಯ ವಿಶೇಷ ಏನೆಂದರೆ ಅತ್ಯಂತ ಸಾಧಾರಣ ವಿಷಯಗಳಲ್ಲೂ ಅಸಾಧಾರಣವನ್ನು ಗಮನಿಸುತ್ತಾನೆ.
ಬೆಂದರೆ ಮಾತ್ರ ಬೇಂದ್ರೆಯಾಗುತ್ತಾರೆ ಎಂದು ನುಡಿದು ಯಾರೇ ಆದರೂ ಓದಿ ಅನುಭವಗಳಿಸಿ ಮಾಗಿದಾಗ ಕವಿಯಾಗಿ ಹೊರಹೊಮ್ಮುತ್ತಾನೆ ಎಂದು ನುಡಿದು, ಜಿ ಎಸ್ ಶಿವರುದ್ರಪ್ಪ, ಪುತಿನ, ಬೇಂದ್ರೆ ಮುಂತಾದವರನ್ನು, ಅವರ ಕಾವ್ಯಗಳ ಮೌಲ್ಯವನ್ನು ಮನೋಜ್ಞವಾಗಿ ತಿಳಿಸಿದರು. ಎಷ್ಟೋ ಬಾರಿ ಕವಿತೆಯೇ ಕವಿಯನ್ನು ಹುಡುಕಿಕೊಂಡು ಬರುತ್ತದೆ, ಇಡೀ ಜಗತ್ತಿನಲ್ಲಿ ಯಾರೂ ಸಾಮಾನ್ಯರಲ್ಲ ಪ್ರತಿಯೊಬ್ಬರಲ್ಲೂ ಕವಿಮನ ಇರುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕೆ ವಿ ತಿರುಮಲೇಶರ ಸೀತಾಫಲ ಮಂಡಿ ಕವನವನ್ನು ಪ್ರಸ್ತುತಪಡಿಸಿ ಅದರಲ್ಲಿ ಅಡಗಿರುವ ಮೌಲ್ಯವನ್ನು ವಿಸ್ತಾರವಾಗಿ ತಿಳಿಸಿ, ಈ ಕವಿತೆ ಸರಳವಾಗಿ ತೋರಿದರೂ ಎಂತಹ ಗಹನವಾದ, ಗಾಢವಾದ ಅರ್ಥವನ್ನು ತೋರಿಸುತ್ತಿದೆ ಎನ್ನುವುದನ್ನು ಬಹು ಸುಂದರವಾಗಿ ತಿಳಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳ ಕವನಗಳ ಸಂಕ್ಷಿಪ್ತ ಅವಲೋಕನ ಮಾಡಿ ಎಲ್ಲರನ್ನೂ ಶ್ಲಾಘಿಸಿದರು.
ಭರತನಾಟ್ಯ ಕಾರ್ಯಕ್ರಮದಲ್ಲಿ ವಿದುಷಿ ನವ್ಯಾ ಪ್ರಮೋದ್ ಹಾಗೂ ಅವರ ಶಿಷ್ಯೆಯರಿ0ದ ಪುಷ್ಪಾಂಜಲಿ, ವಾತಾಪಿ ಗಣಪತಿ, ತ್ರಿಪುರ ಸುಂದರಿ ಇತ್ಯಾದಿ ಕೃತಿಗಳ ಮೂಲಕ ಅಭಿವ್ಯಕ್ತಿಗೊಳಿಸಿದ ಭರತನಾಟ್ಯ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಜಿ ಪಿ ನಾಗರಾಜ್ ,ಸಿದ್ದಣ್ಣ ಸೊನ್ನದ, ಪ್ರಮೋದ್ ಮಾರ್ಪಳ್ಳಿ ಅವರು ಗಣ್ಯರ,ಕಲಾವಿದೆಯ ಪರಿಚಯ ಮಾಡಿಕೊಟ್ಟರು.
ಕವಿಗಳಾದ ಕೆ ವಿ ಲಕ್ಷ್ಮಣಮೂರ್ತಿ, ಜಿ ವಿ ಹೆಗಡೆ, ಸಿದ್ದಣ್ಣ ಸೊನ್ನದ, ಬಿ ವಿ ರಾವ್, ಕೊಪ್ಪರಂ ಅನ್ನಪೂರ್ಣ, ಪತ್ತಂಗಿ ಮುರಳಿ, ಡಾ. ಅಂಬುಜಾಕ್ಷಿ ಬೀರೇಶ್, ಜಿ ಪಿ ನಾಗರಾಜ್ ,ಎಲ್ ಚಿಕ್ಕಲಿಂಗೇಗೌಡ, ಪ್ರಭಾಕರ್ ಗಂಗೊಳ್ಳಿ, ರಾಮಣ್ಣ ಎ, ಧೀರೇಂದ್ರ ನಾಗರಹಳ್ಳಿ, ಡಾ. ಶಿವಸ್ವಾಮಿ, ನಿಂಗಮ್ಮ ಬಾವಿಕಟ್ಟಿ, ಹೇಮಂತ್ ಲಿಂಗಣ್ಣ ಅವರು ತಮ್ಮ ಕವನಗಳನ್ನು ವಾಚಿಸಿ ಕವಿಗೋಷ್ಠಿಗೆ ಮೆರಗು ತಂದರು.
ನಿಂಗಮ್ಮ ಬಾವಿಕಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಸಾಹಿತಿ, ಸಂಘಟಕ ವಿ ಐ ಹೆಗಡೆ ನಿರೂಪಿಸಿದರು. ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ, ಉಪನ್ಯಾಸಕರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಕರಕುಶಲ ವಿನ್ಯಾಸಕಿ ಆರ್ ವತ್ಸಲಾ ಹಾಗೂ ಗಣ್ಯರು ಕಲಾವಿದೆ ನವ್ಯ ಪ್ರಮೋದರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ರಾಮಚಂದ್ರ ರೆಡ್ಡಿ, ಬಿ.ಸತ್ಯನಾರಾಯಣ, ವಿಶ್ವೇಶ್ವರ ಭಟ್, ಎಸ್ ಜೆ ಕೃಷ್ಣಮೂರ್ತಿ, ಮಂಜುನಾಥ ಮಾರ್ಪಳ್ಳಿ, ಶ್ರೀನಿವಾಸ, ನಂಜುಂಡಸ್ವಾಮಿ, ಗೀತಾ ಸಭಾಹಿತ, ಪ್ರಕಾಶ ಪೂರ್ಣಮಠ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಕವಿಗಳು ವಾಚನ ಮಾಡಿದ ಕವನಗಳ ಇ – ಪುಸ್ತಕವನ್ನು ಕಾರ್ಯಕ್ರಮದಲ್ಲೇ ಬಿಡುಗಡೆಗೊಳಿಸಿದ್ದು ಲಿಂಕ್ ನಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
