
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲು
ನಾನೇಕೆ ಸಂಸ್ಕೃತಿ ಹೀನನಾಗುವೆ
ಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲು
ನಾನೇಕೆ ದಡ್ಡತನ ತೋರಿ ನಡೆಯುವೆ.
ನೊಂದಾಗ ಸಂತೈಸುವ ಸೋದರಿ ಒಲವಿರಲು
ನಾನೇಕೆ ಅಂಜಿ ಅಳುಕಿ ಮರೆಯಾಗಲಿ
ಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲು
ನಾನೇಕೆ ಪರರ ಪ್ರೀತಿ ಬಯಸಿ ನಡೆಯಲಿ.
ಸದ್ಗುಣ ಸಂಪನ್ನರ ಸಂಗ ನನ್ನೊಂದಿಗೆ ಇರಲು
ದುರ್ಜನರ ಸಹವಾಸ ನಾನೇಕೆ ಮಾಡಲಿ
ಮಾಡುವ ಕಾಯಕದಲ್ಲಿ ಭಕ್ತಿ ನನ್ನೊಳಗಿರಲು
ನಾನೇಕೆ ಉಂಡ ಮನೆಗೆ ಕನ್ನ ಹಾಕಿಲಿ.
ಹೆಚ್ಚಿಲ್ಲವಾದರೂ ತಕ್ಕಮಟ್ಟಿನ ಜ್ಞಾನವಿರಲು
ನಾನೇಕೆ ಅಜ್ಞಾನಿಗಳ ದಂಡು ಕಟ್ಟಲಿ ಆತ್ಮಸಾಕ್ಷಿಯ ಶುದ್ಧ ಪ್ರಜ್ಞೆಯು ಕಾಡುತಿರಲು
ನಾನೇಕೆ ಗಾಳಿ ಮಾತುಗಳಿಗೆ ಕಿವಿಗೊಡಲಿ
ಸಾಮಾಜಿಕ ಚಿಂತನೆಯು ಮೊಳಕೆ ಒಡೆದಿರಲು
ನಾನೇಕೆ ಸ್ವಾರ್ಥ ಸಾಧನೆ ಬಯಸಲಿ
ಗದ್ಧಲವಿಲ್ಲದ ಕಾಯಕ ಯೋಗಿ ನಾನಾಗಿರಲು
ನಾನೇಕೆ ಶಿಪಾರಸ್ಸಿನ ಮೊರೆ ಹೋಗಲಿ
ಪ್ರಾಮಾಣಿಕ ಹೋರಾಟದ ಕಿಚ್ಚು ನನ್ನಲ್ಲಿರಲು
ನಾನೇಕೆ ಅನ್ಯಾಯಕ್ಕೆ ತುಪ್ಪ ಸುರಿಯಲಿ
ಗೌರವ ಸನ್ಮಾನಕ್ಕೆ ಅರ್ಹತೆ ನನ್ನೊಳಡಗಿರಲು
ನಾನೇಕೆ ಅವರಿವರ ಕಾಲಿಡಿದು ಬೇಡಕೊಳ್ಳಲಿ.
✍️ ಬ್ಯಾಡನೂರು ವೀರಭದ್ರಪ್ಪ ಶಿವಶರಣ,
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ: 9740199896.
