ದಕ್ಷಿಣ ಕನ್ನಡ/ ಮಂಗಳೂರು: ದಿ. 19/01/2025
ನಿನ್ನೆ ಪೂರ್ವಾನ್ನ 8:00 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಂಗಳಾದೇವಿ ದೇವಸ್ಥಾನದ ಬಳಿಯ ರಾಮಕೃಷ್ಣ ಮಠದಲ್ಲಿ ಹರಿಕಥಾ ಸಮ್ಮೇಳನ ಜರುಗಿತು. ತಮ್ಮ ಸಂಪನ್ಮೂಲ ಭಾಷಣದಲ್ಲಿ ಕುಂಬಳೆ ಕೀರ್ಥನಾ ಕುಟೀರದ ನಿರ್ದೇಶಕರಾದ ಶ್ರೀ ಶಂನಾಡಿಗರು ಹರಿಕಥೆಯಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಮಾಜಮುಖಿ ಸಂಘ ಸಂಸ್ಥೆಗಳು ಮುಂದೆ ಬಂದು ಹರಿಕಥೆ ಮತ್ತು ಹರಿದಾಸರಿಗೆ ಸಹಕರಿಸಬೇಕಾಗಿ ವಿನಂತಿಸಿದರು. ಹರಿಕಥೆ ಸಂಸ್ಕೃತಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ಮಂಡಿಸಿದರು. ಬಂಟ್ವಾಳದ
ಬೊಕ್ಕಸದಲ್ಲಿರುವ ಶಿವರಂಜಿನಿ ಕಲಾ ಸಂಸ್ಥೆಯ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಗಿಸಿದರು. ಕೀರ್ತನಾ ಕುಟೀರ ಎದುರಿಸುತ್ತಿರುವ ತೊಂದರೆಗಳನ್ನು ಸಮಾವೇಷದಲ್ಲಿ ಮಂಡಿಸುತ್ತಾ, ಹರಿಕಥಾ ಸಂಸ್ಕೃತಿಗೆ ಪ್ರೋತ್ಸಾಹ ಮತ್ತು ಶ್ಲಾಗನೆಯ ಕೊರತೆಯಿದೆ. ಶಿವರಂಜಿನಿ, ಕೀರ್ಥನಾ ಕುಟೀರ ದಂಥಾ ಸಂಸ್ಥೆಗಳ ಹರಿಕಥಾ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಮನದಾಳದ ಮಾತುಗಳನ್ನಾಡಿದರು. ಈ ಸಮ್ಮೇಳನ ವನ್ನು ಹರಿಕಥಾ ಪರಿಷತ್ತು ಮಂಗಳೂರು , ರಾಮಕೃಷ್ಣ ಮಠ ಮಂಗಳೂರು ಮತ್ತು ಷಡ್ಜ ಕಲಾ ಪರಿಷತ್ತು ಬೆಂಗಳೂರು ಜಂಟಿಯಾಗಿ ಆಯೋಜಿಸಿತ್ತು.
ಬೆಳಗ್ಗೆ ಮಂಗಳಾದೇವಿ ದೇವಸ್ಥಾನದಿಂದ ಸಂಕೀರ್ತನಾ ಮೆರವಣಿಗೆ ಮೂಲಕ ಹರಿದಾಸರು ಮತ್ತು ಕಲಾಸಕ್ತರ ದೊಡ್ಡ ಸಮೂಹ ರಾಮಕೃಷ್ಣ ಮಠದ ವಿವೇಕಾನಂದ ಸಂಭಾಂಗಣಕ್ಕೆ ಬಂದು ಆಸೀನರಾದರು. ಪರಮ ಪೂಜ್ಯ ಜಿತಕಾಮಾನಂದಜಿ ಮಹಾರಾಜ್ ಸ್ವಾಮೀಜಿ ಯವರ ದಿವ್ಯ ಹಸ್ತದಿಂದ ಪೂರ್ವಾನ್ಹ 9:30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು. ಸಮ್ಮೇಳಾನಾಧ್ಯಕ್ಷ ಕೆ. ಮಹಾಬಲ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಎಂ .ಪ್ರಭಾಕರ ಜೋಷಿ ಯವರು ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಘನ ಉಪಸ್ಥಿತರಾಗಿ ಮಾನ್ಯ ಲೋಕ ಸಭಾಸದಸ್ಯ ಕ್ಯಾಪ್ಟನ್ ಬಿಜೇಷ್ ಚೌಟ, ವಿಧಾನ ಸಭಾ ಸದಸ್ಯ ಶ್ರೀ.ವೇದವ್ಯಾಸ ಕಾಮತ್, ಮಾಜಿ ಶಾಸಕ ಶ್ರೀ. ಕೃಷ್ಣ ಜೆ ಪಾಲೆಮಾರ್, ಧರ್ಮದರ್ಶಿ ಡಾ ಶ್ರೀ ಹರಿಕೃಷ್ಣ ಪುನರೂರು, ಶ್ರೀ. ಎಂ.ಬಿ.ಪುರಾಣಿಕ್, ಡಾ. ಎಂ.ಶ್ರೀನಾಥ್, ಹರಿಕಥಾ ವಿದ್ವಾನ್ ಶ್ರೀ ಶ್ರೀಶವಿಠಲ ದಾಸರು, ಶ್ರೀ.ಪ್ರದೀಪ್ ಕುಮಾರ್ ಕಲ್ಕೂರ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಸುಧಾಕರ ರಾವ್ ಪೇಜಾವರ ರವರು ಘನ ಉಪಸ್ಥಿತರಾಗಿದ್ದರು.
ಬೆಳಿಗ್ಗೆ 10:40ಕ್ಕೆ ತುಳುನಾಡಿನ ಹರಿಕಥಾ ಪರಂಪರೆ ಎಂಬ ಪ್ರಥಮ ಗೋಷ್ಠಿಯಿಂದ ಆರಂಭಗೊಂಡ ಸಮ್ಮೇಳನ, ಮುಂದೆ 11:45 ರಿಂದ ಕುಮಾರಿ ಪ್ರಣಮ್ಯ. ಕೆ ಯವರಿಂದ ಸಣ್ಣ ಹರಿಕಥೆ,12:15 ರಿಂದ ಹರಿಕಥೆಯಲ್ಲಿ ಪೀಠಿಕೆ, ಉಪಕಥೆ, ಸಂಗೀತ ಮತ್ತು ಜೀವನ ಮೌಲ್ಯಗಳು, 1:45 ರಿಂದ ಕುಮಾರಿ ಪೂಜಾ ವಾಸುದೇವ ಐಲ ರವರಿಂದ ಸಣ್ಣ ಹರಿಕಥೆ, 2:15 ರಿಂದ ಹಳೆಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮ, 2:45 ರಿಂದ ಗೌರವಾಭಿನಂದನೆ, 3ಃ15 ರಿಂದ ಹರಿಕಥಾ ಕಲೆಯ ಪುನರುಸ್ಥಾನದ ಸವಾಲುಗಳು ಸಂವಾದ ಕಾರ್ಯಕ್ರಮ,
4ಃ30 ರಿಂದ ಕಲಾಶ್ರೀ ಶ್ರೀ ಲಕ್ಷ್ಮಣದಾಸ ರಿಂದ ಹರಿಕಥೆ ಜರುಗಿ, ದಿನ ಪೂರ್ತಿ ನೆರೆದ ಸಮಸ್ತ ಜನಮಾನಸ ಹರಿ ಸ್ಮರಣೆಯಲ್ಲಿ ತಲ್ಲೀನರಾಗಿದ್ದರು. ಸಂಜೆ 5ಃ00 ರಿಂದ ಸಮಾರೋಪ ಕಾರ್ಯಕ್ರಮವು ಸಮ್ಮೇಳನಾಧ್ಯಕ್ಷ ಕೆ.ಮಹಾಬಲ ಶೆಟ್ಟರ ಘನಾಧ್ಯಕ್ಷತೆಯಲ್ಲಿ ಜರುಗಿತು. ಸಮಾರೋಪ ಸಮಾರಂಭದಲ್ಲಿ ಪರಮ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹರಾಜ್, ಕ್ಯಾಪ್ಟನ್ ಗಣೇಶ ಕಾರ್ಣಿಕ್, ಆಕಾಶವಾಣಿ ಮಂಗಳೂರಿನ ಸಹಾಯಕ ನಿರ್ದೇಶಕ ಶ್ರೀ. ಸೂರ್ಯನಾರಾಯಣ ಭಟ್, ಶ್ರೀಮತಿ ಭಾರತಿ ಗುರುಪ್ರಸಾದ್ ಶೆಟ್ಟಿ ಗೌರವ ಉಪಸ್ಥಿತರಿದ್ದರು. ಡಾ.ಎಸ್ .ಗುರುದಾಸ್ ರವರ ವಂದನಾರ್ಪಣೆಯೊಂದಿಗೆ ಹರಿಕಥಾ ಸಮ್ಮೇಳನ 2025 ಮುಕ್ತಾಯಗೊಂಡಿತು.
ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ
