ಪ್ರಸ್ತುತ ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ತನ್ನ ಸ್ಥಾನವನ್ನು ಪ್ರೀತಿಸುತ್ತಾ ಗೌರವಿಸಬೇಕು. ಈ ಸಮಾಜದಲ್ಲಿ ನಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನು ಮರೆತು ತನ್ನ ಸ್ಥಾನವನ್ನೇ ಗರ್ವದಿಂದ ಬೀಗಿಕೊಂಡು ಅಧಿಕಾರವನ್ನು ಅವರವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಈ ಸಮಾಜದಲ್ಲಿ ಇಂತಹ ಅಧಿಕಾರಿಗಳೇ ಎಲ್ಲೆಲ್ಲಿಯೂ ತುಂಬಿ ತುಳುಕುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಅಧಿಕಾರವನ್ನು ಸಮರ್ಪಕವಾಗಿ ನಿರ್ವಹಿಸುವವರು ಬೆರಳೆಣಿಕೆಯಷ್ಟು ಜನರು ಮಾತ್ರ.
ಒಂದು ಕಚೇರಿಯ ಮುಂದೆ ಅಥವಾ ಒಬ್ಬ ಅಧಿಕಾರಿಯ ಮುಂದೆ ಯಾವುದೇ ವ್ಯಕ್ತಿ ಹೋಗಿ ನಿಂತಿದ್ದಾನೆ ಎಂದರೆ ಅವನಿಗೆ ಸಹಿಸಲಾಗದ ಸಮಸ್ಯೆಯಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರಿಗಳು ತಮ್ಮ ದರ್ಪವನ್ನು ಪ್ರದರ್ಶಿಸುವುದು ಎಷ್ಟರ ಮಟ್ಟಿಗೆ ಸರಿ. ಒಬ್ಬ ವಿದ್ಯಾರ್ಥಿ ತರಗತಿಗೆ ಹೋಗದೆ ಅಧಿಕಾರಿಗಳಿಗೆ ದೂರು ಸಲ್ಲಿಸಲು ಹೋಗಿದ್ದಾಗ, ಒಬ್ಬ ರೈತ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಯ ಮುಂದೆ ಬಂದು ನಿಂತಿದ್ದಾಗ, ಒಬ್ಬ ಹೆಂಗಸು ಅಧಿಕಾರಿಗಳನ್ನು ಕಾಣಲೆಂದು ಕಾಯುತ್ತಿದ್ದಾಗ, ಪ್ರತಿದಿನ ಕೆಲಸಕ್ಕೆ ಹೋಗುತ್ತಿರುವ ವ್ಯಕ್ತಿ, ಕೆಲಸಕ್ಕೆ ಹೋಗದೆ ಅಧಿಕಾರಿಗಳನ್ನು ಭೇಟಿಯಾಗಲು ಬಂದಾಗ ಅಥವಾ ಯಾರೇ ನಿಮ್ಮ ಬಳಿ ಬಂದಾಗ ಮಹಾನೀಯ ಅಧಿಕಾರಿಗಳೇ ನಿಮ್ಮ ಅಹಂ ಬದಿಗಿಟ್ಟು ಅವರ ಸಮಸ್ಯೆಗಳಿಗೆ ಸ್ಪಂದಿಸಿ.
ದೂರು ಸಲ್ಲಿಸಲು ಬಂದವರು ನೀಡುವ ಹೇಳಿಕೆಯಾಗಲಿ, ಪತ್ರಗಳನ್ನಾಗಲಿ ನಿರ್ಲಕ್ಷಿಸಬೇಡಿ, ಅವರು ನಿಮ್ಮ ಮೇಲೆ ಭರವಸೆ ಇಟ್ಟು ಬಂದಿರುತ್ತಾರೆ. ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯನ್ನು ಸುಳ್ಳು ಮಾಡಬೇಡಿ ಅಧಿಕಾರವಿದೆ ಎಂಬ ಗರ್ವದಿಂದ ಮಾನವೀಯತೆಯನ್ನು ಮರೆಯಬೇಡಿ, ನಾನು ಅಧಿಕಾರಿ ನಾನು ಹೇಳಿದಂತೆ ಆಗಬೇಕೆಂದು ನೈತಿಕತೆಯನ್ನು ಮೀರಬೇಡಿ ಉತ್ತಮ ಸಮಾಜದ ನಿರ್ಮಾಣದಲ್ಲಿ ನಿಮ್ಮ ಪಾತ್ರ ಅಪಾರವಾದದ್ದಾಗಿದೆ ಅಧಿಕಾರ ಎನ್ನುವುದು ಜವಾಬ್ದಾರಿಯೇ ವಿನಃ ಅಹಂ ಅಲ್ಲ ನೆನಪಿರಲಿ.

- ರಾಮಕೃಷ್ಣ .ಎನ್., ಯುವ ಸಾಹಿತಿ
