ಬೆಳಗಾವಿ: ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ವಿಚಾರವಾಗಿ ಮಾದಿಗ ಮತ್ತು ಸಂಬಂಧಿತ ಜನಾಂಗಳಿಗೆ ಕನಿಷ್ಠ 6% ಒಳಮೀಸಲಾತಿ ಅಥವಾ ಪ್ರತ್ಯೇಕ ಪರಿಶಿಷ್ಟ ಜಾತಿಯ 6% ಮೀಸಲಾತಿಗಾಗಿ ಶಿಫಾರಸ್ಸು ಮಾಡುವಂತೆ ಆದಿ ಜಾಂಬವ ಯುವ ಬ್ರಿಗೇಡ್ ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ ಒತ್ತಾಯಿಸಿದರು.
ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯ ಸರ್ಕಾರಗಳ ಅಧಿಕಾರ ಎಂದು ತೀರ್ಪು ನೀಡಿದ್ದು, ಅದರಂತೆ ವಿವಿಧ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಪ್ರಕ್ರಿಯೆಗಳು ಪ್ರಗತಿಯಲ್ಲಿರುತ್ತವೆ ಎಂದರು.
ಅದರಂತೆ ಕರ್ನಾಟಕದಲ್ಲಿ ನೊಂದ ಮತ್ತು ನಿಷ್ಠ ಅವಕಾಶಗಳಲ್ಲಿ ಅನ್ಯಾಯ ಅನುಭವಿಸುತ್ತಿರುವ ಜನಾಂಗಗಳು ಒಳಮೀಸಲಾತಿಗಾಗಿ ನ್ಯಾಯಯುತವಾದ ಹಕ್ಕೊತ್ತಾಯ ಮಾಡುತ್ತಿವೆ, ಆ ನಿಟ್ಟಿನಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವ ಅವಕಾಶ ತಮಗೆ ಲಭಿಸಿರುವುದು ನೊಂದ ಮತ್ತು ಅನ್ಯಾಯಕ್ಕೆ ಒಳಗಾದ ಜನಾಂಗಗಳಿಗೆ ಒಂದು ದೊಡ್ಡ ಭರವಸೆ ಮೂಡಿಸಿದೆ.
ಆ ನಿಟ್ಟಿನಲ್ಲಿ ಮಾನ್ಯರಾದ ತಮ್ಮಲ್ಲಿ ಕೆಲವೊಂದು ಅಂಶಗಳನ್ನು ವಿನಂತಿಸುತ್ತಿದ್ದೇವೆ.
ಅದರಲ್ಲಿ ಸಂವಿಧಾನವನ್ನು ಗೌರವಿಸುವವರು ಮತ್ತು ಸಾಮಾಜಿಕ ನ್ಯಾಯದ ಪರವಾಗಿರುವ ಪ್ರತಿಯೊಬ್ಬರೂ ಒಳಮೀಸಲಾತಿ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಒಳಮೀಸಲಾತಿ ವಿರೋಧ ಮಾಡುತ್ತಾರೆಂದರೆ ಅವರ ಒಳಗೆ ಮನುವಾದಿ ಮನಸ್ಥಿತಿ ಇದ್ದು, ಡೋಂಗಿಯಾಗಿ ಸಂವಿಧಾನ, ದೇಶಪ್ರೇಮ ಮತ್ತು ಸಮಾನತೆಯ ಬಗ್ಗೆ ಮಾತನಾಡುತ್ತಾರೆ ಎಂದರ್ಥ. ಆದ್ದರಿಂದ ಅಂತಹವರ ವಿತಂಡ ವಾದಗಳು ಮತ್ತು ಸಂವಿಧಾನ ವಿರೋಧಿ ಮನಸ್ಥಿತಿಯ ಅಹವಾಲುಗಳನ್ನು ಯಾವುದೇ ಸಂದರ್ಭದಲ್ಲಿಯೂ ಪುರಸ್ಕರಿಸಬಾರದು ಎಂದು ವಿನಂತಿಸುತ್ತೇವೆ ಎಂದು ತಿಳಿಸಿದರು.
ಒಳಮೀಸಲಾತಿ ಬೇಡ ಎನ್ನುವವರು ಮತ್ತು ಒಳಮೀಸಲಾತಿ ಬೇಕು ಅಥವಾ ಬೇಡ ಎಂದು ಹೇಳದೇ ತಟಸ್ಥವಾಗಿರುವ ಜನಾಂಗಗಳಿಗೆ ಒಳಮೀಸಲಾತಿ ಶಿಫಾರಸ್ಸು ಮಾಡದೇ ಅಂತಹ ಜನಾಂಗಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಮಾಡಲಾದ ಮೀಸಲಾತಿ ಪ್ರಮಾಣಗಳು ಎಷ್ಟು ಇವೆ ಅವುಗಳನ್ನು ಒಂದು ಮಾಡಿ ಅವರೆಲ್ಲರನ್ನೂ ಒಂದೇ ಗುಂಪು ಮಾಡಿ ಒಳಮೀಸಲಾತಿ ಬೇಕು ಎನ್ನುವವರನ್ನು ಪ್ರತ್ಯೇಕಿಸಿ, ಅವರಿಗೆ ಶಿಫಾರಸ್ಸು ಮಾಡಿದ ಪ್ರಮಾಣವನ್ನು ಅವರಿಗೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಹಾಗೂ ಮಾದಿಗ ಮತ್ತು ಸಂಬಂಧಿತ ಜನಾಂಗಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ 69 ಒಳಮೀಸಲಾತಿ ನೀಡಲು ಶಿಫಾರಸ್ಸು ಮಾಡಬೇಕು.
ಮತ್ತು ಒಟ್ಟು ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಮತ್ತು ಸಂಬಂಧಿತ ಜನಾಂಗ 1911 ರ ಸೌತ್ ಇಂಡಿಯನ್ ಸೆನ್ಸೆಸ್ ಪ್ರಕಾರ 58% ಮತ್ತು 1975 ರ ಎಲ್.ಜಿ.ಹಾವನೂರ್ ಕಮೀಷನ್ ವರದಿ ಪ್ರಕಾರ 57.2% ಇದ್ದು, ಅದರಂತೆ 2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 1,04,74,992 ಇದ್ದು ಇದರಲ್ಲಿ 57.2% ಅಂದರೆ 39,91,695 ಆಗುತ್ತದೆ.ಮತ್ತು ಪ್ರಸ್ತುತ ಇರುವ 15% ಪರಿಶಿಷ್ಟ ಜಾತಿಗಳ ಒಳಮೀಸಲಾತಿ 57.2% ಎಂದರೆ ನ್ಯಾಯುತವಾಗಿ ಮಾದಿಗ ಆನಾರಕ್ಕೆ 858% ಒಳಮೀಸಲಾತಿ ದೊರೆಯಬೇಕಾಗುತ್ತದೆ. ಆದರೆ ಕೇವಲ 6% ಮಾತ್ರ ಶಿಫಾರಸ್ಸು ಮಾಡಿದ್ದು ಅದರಲ್ಲಿ ಯಾವುದೇ ವ್ಯತ್ಯಾಸಕ್ಕೆ ಅವಕಾಶ ಕೊಡದೇ ಕನಿಷ್ಠ 6% ಒಳಮೀಸಲಾತಿಗಾಗಿ ಶಿಫಾರಸ್ಸು ಮಾಡಬೇಕು ಎಂದು ವಿನಂತಿಸುತ್ತೇವೆ.
ನೊಂದ ಮಾದಿಗ ಮತ್ತು ಸಂಬಂಧಿತ ಜನಾಂಗಕ್ಕೆ ಒಳಮೀಸಲಾತಿ ಅನಿವಾರ್ಯವಾಗಿದ್ದು ಇದನ್ನು ಕೂಡಲೇ ಜಾರಿ ಮಾಡುವ ಅಗತ್ಯಯತೆ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಹಾಗೂ ಒಳಮೀಸಲಾತಿ ಬೇಡ ಎಂದು ಎಲ್ಲವನ್ನೂ ನಾವೇ ತಿಂದು ಉಳಿದವರು ಹಸಿವಿನಿಂದ ಹಾಗೇ ಸತ್ತು ಹೋಗಲಿ ಎಂದು ಬಯಸುತ್ತಿರುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಭಾರತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಯಾವ ಪ್ರವರ್ಗದಲ್ಲಿ ಮೀಸಲಾತಿ ದೊರೆಯುತ್ತಿದ್ದೆಯೋ ಅದೇ ಪ್ರವರ್ಗದಲ್ಲಿ ಕರ್ನಾಟಕದಲ್ಲಿ ಮುಂದುವರೆಯುವ ವ್ಯವಸ್ಥೆ ಮಾಡಿ ಅವರು ಅವರು ಪರಿಶಿಷ್ಟ ಜಾತಿಗಳ ಸಾಮಾಜಿಕ ನ್ಯಾಯಕ್ಕೆ ವಿರೋಧಿಸುವುದನ್ನು ತಪ್ಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಒಳ ಮೀಸಲಾತಿ ಜಾರಿಯ ಜೊತೆಗೆ ರಾಜಕೀಯವಾಗಿ ಕೂಡಾ ಒಳ ಮೀಸಲಾತಿ ಜಾರಿ ಅಗತ್ಯವಿದ್ದು ರಾಜಕೀಯವಾಗಿ ಒಳ ಮೀಸಲಾತಿ ಜಾರಿ ಮಾಡಲು ಸರಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ವಿನಂತಿಸಲಾಗಿದೆ ಎಂದು ತಿಳಿಸಿ
ಮನವಿ ಪತ್ರವನ್ನು ಗದಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಮ ಆದಿ ಜಾಂಬವ ಯುವ ಬ್ರಿಗೇಡ್ ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಡಿ. ಜಿ ಕಟ್ಟಿಮನಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ, ಪ್ರವೀಣ ತಗ್ಗಿನಮನಿ, ಯಮನೂರ ಮಾದರ, ರಾಘವೇಂದ್ರ ಪರಾಪೂರ ಮುಂತಾದವರು ಇದ್ದರು.
