ಬೀದರ್/ ಬಸವಕಲ್ಯಾಣ : ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮತ್ತು ಸುತ್ತೋಲೆಗಳಿವೆ. ಆದರೂ ಬಸವಕಲ್ಯಾಣದ ಕೆಲ ಇಲಾಖೆಯ ಅಧಿಕಾರಿಗಳು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇತ್ತೀಚಿಗೆ ಈ ಬೆಳವಣಿಗೆ ತೀವ್ರವಾಗಿದ್ದು, ಬಸವಕಲ್ಯಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಜನಪ್ರತಿನಿಧಿಗಳು ಅಥವಾ ಮಠಾಧೀಶರು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ಕಚೇರಿಯಲ್ಲಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರಿ ನೌಕರರು ಕಛೇರಿಗೆ ನಿಗದಿತ ಅವಧಿಗೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರದ ಸುತ್ತೋಲೆ ಇದೆ. ಆದಾಗ್ಯೂ, ಸರ್ಕಾರಿ ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಕಾರ್ಯನಿಷ್ಠೆಯ ಕೊರತೆ ಎದ್ದು ಕಾಣುತ್ತಿದೆ.
ಬಸವಕಲ್ಯಾಣದ ದೂರದ ಗ್ರಾಮಗಳಿಂದ ಸಾರ್ವಜನಿಕರು ಸರ್ಕಾರಿ ಕಛೇರಿಯಲ್ಲಿನ ತಮ್ಮ ಕಾರ್ಯಗಳಿಗಾಗಿ ಬೆಳಗ್ಗೆ ನಿಗಧಿತ ಅವಧಿಗೆ ಸರ್ಕಾರದ ಕಛೇರಿಗಳಿಗೆ ಭೇಟಿ ನೀಡಿದಾಗ ಬಹುತೇಕ ಕಛೇರಿಗಳಲ್ಲಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಛೇರಿಗೆ ಹಾಜರಿಲ್ಲದೆ ಇರುವ ಕಾರಣ ಸಾಮಾನ್ಯ ಜನರು ಪರದಾಡುವಂತಾಗುತ್ತಿದೆ.
ಸರ್ಕಾರಿ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಕಛೇರಿ ಅವಧಿ ಪೂರ್ಣವಾಗುವವರೆಗೆ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಡಳಿತ ಎಚ್ಚರಿಸಬೇಕಿದೆ ಈ ಮೂಲಕ ಸರ್ಕಾರಿ ಅಧಿಕಾರಿಗಳಿಂದ ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕೆವೆ.
BOX
ಸಂಘ, ಸಂಸ್ಥೆ, ಮಠ, ರಾಜಕಾರಣಿಗಳ ಹೆಸರಿನಲ್ಲಿ ಕೆಲಸಕ್ಕೆ ಚಕ್ಕರ್
ಕೆಲ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಸಂಘಟನೆಗಳ ಹೆಸರಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಕಂಡು ಬರುತ್ತಿದ್ದು, ಇವರ ಈ ಕಾರ್ಯಕ್ಕೆ ತಾಲೂಕಿನ ಮಠಾಧೀಶರು ಹಾಗೂ ಜನಪ್ರತಿನಿಧಿಗಳಿಂದ ಪ್ರೋತ್ಸಾಹ ಸಿಗುತ್ತಿರುವಂತೆ ಕಾಣುತ್ತಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಈ ಕಡೆ ಗಮನಹರಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿ ಕರ್ತವ್ಯದ ಅವಧಿಯಲ್ಲಿ ಕಾಲಹರಣ ಮಾಡದಂತೆ ಎಚ್ಚರಿಕೆ ನೀಡಬೇಕಿದೆ.
ವರದಿಗಾರರು ಶ್ರೀನಿವಾಸ ಬಿರಾದಾರ
