ಬಳ್ಳಾರಿ/ ಕಂಪ್ಲಿ : ದ. ರಾ.ಬೇಂದ್ರೆಯವರ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಶಿಕ್ಷಕಿ ಕೆ . ಶ್ವೇತಾ ತಿಳಿಸಿದರು.
ಪಟ್ಟಣದ ಕೋಟೆಯಲ್ಲಿ ಸ್ವಾಮಿ ವಿವೇಕಾನಂದ ಶಾಲೆಯಿಂದ ಹಮ್ಮಿಕೊಂಡ ಕನ್ನಡದ ವರ ಕವಿ ದ.ರಾ. ಬೇಂದ್ರೆ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಬೇಂದ್ರೆ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಬೇಂದ್ರೆ ಜನವಾಣಿಯ ಪ್ರತೀಕವಾಗಿದ್ದರು. ಬದುಕಿನ ಕಹಿಯನ್ನುಂಡು ಜನಕ್ಕೆ ಸಿಹಿಯನ್ನು ಹಂಚಿದವರು.
ಕನ್ನಡ ಕಾವ್ಯ ಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ಶಬ್ದ ಗಾರುಡಿಗರೆಂದೇ ಪ್ರಸಿದ್ಧರಾಗಿರುವ ಬೇಂದ್ರೆಯವರು ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸಿದ್ದಾರೆ ನೊಂದ ಜೀವಗಳಿಗೆ ಸಾಂತ್ವಾನ ನೀಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಸಂಕೇತ ರೂಪದಲ್ಲಿ ಕಾವ್ಯ ರಚಿಸಿದ ಶ್ರೇಯಸ್ಸು ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದರು. ಅವರ ಸಾಹಿತ್ಯ ಕೃತಿಗಳನ್ನ ಗಂಭೀರವಾಗಿ ಅಧ್ಯಯನ ಮಾಡಿ ಬದುಕಿಗೆ ಪ್ರೇರಣೆ ಪಡೆಯುವ ಮಟ್ಟಿಗೆ ಒಂದು ವಿಶ್ವವಿದ್ಯಾನಿಲಯದಂತೆ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ನಮ್ಮ ಮುಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರು ಬಡಿಗೇರ್ ಜಿಲಾನಸಾಬ್, ವರ್ಷಾ ಮಂಜುಮದಾರ್, ಕೋಲ್ಕರ ಉಮಾ, ಮುಸ್ಕಾನ, ಸುನಿತಾ, ಮಣ್ಣೂರ ಲಕ್ಷ್ಮಿ , ಜೆ ಅಕ್ಷತಾ, ಗೌಸಿಯಾ ಸೇರಿದಂತೆ ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
