ಅಜ್ಜ ನಮ್ಮಜ್ಜ ಅಜ್ಜ ಕವಿತಾ ಬರಿತಿದ್ದ
ಬರದಂದ್ರss
ಬರದ ಕವಿತಾನ ಬಾರಿ ಚಂದss ಓದ್ತಿದ್ದ
ಹಕ್ಕಿ ಹಾರುದ ನೋಡಿರೇssನು?
ಪಾತರಗಿತ್ತಿ ಪಕ್ಕಾ ನೋಡಿರೇssನು?
ಅಂತಿದ್ದ..
ವಾರದಾಗ ಮೂರಸಾರ್ತಿ
ಬಂದ ಹೋಗಾಂವ್ನ ದಾರ್ಯಾಗ ನಿಂತು
ನೆತ್ತಿಮ್ಯಾಲ ಕೈಹೊತ್ತು
ಹೊತ್ತ ಅಳಿತಿದ್ದ..
ಮತ್ತ ಸುತ್ತ ಸುತ್ತ ಸುಳದ್ಯಾಡಿ ಕವಿತಾ ಬರಿತಿದ್ದ..
ನಮ್ಮಜ್ಜ..
ನನಗ ಮಾಸ್ತರ್ ಅಂದ್ರು ತಪ್ಪಾಗುದಿಲ್ಲ..
ಕನ್ನಡಕ್ಕೊಬ್ಬನ ಕನ್ನಡಕದ ಅಜ್ಜ, ಮಾಸ್ತರ್ ಅಂದ್ರು ತಪ್ಪಾಗುದಿಲ್ಲ..
ಅಂವ ಕಚ್ಚಿ ದೋತ್ರ ಉಟ್ ಹೊಂಟ್ರ
ಮುಚ್ಚಿದ ಬಾಯಿ ತೆಗದು ನಕ್ರ
ಅಳಕೊಂತ್ ಕುಂತಿದ್ ಅಕ್ಷರಗೋಳೆಲ್ಲ
ಕುಣಿಯೋಣು ಬಾರಾss
ಕುಣಿಯೋಣು ಬಾರಾss ಅಂತಿದ್ವಂತ..
ಹುಣಸಿ ಹೂವಿಗು ರಾಗಾ ಕಲಿಸಿ
ತಾಳಿಲ್ದ ತಂತಿಲ್ದ ಕುಣದ ಕುಣಿತಿದ್ದ
ಮೈ ಮನಸೇ ಮನಸ್ತಿದ್ದ ನಮ್ಮಜ್ಜ
ನನಗ ಮಾಸ್ತರ್ ಅಂದ್ರು ತಪ್ಪಾಗುದಿಲ್ಲ…
ಕವಿತಾದಾಗ ಸವಿ ತಾ ಉಣಸಿ
ಕವಿ ತಾ ಆಗಿ ಹೇಳತಾನು ಕವಿತಾ
ನಾನು ನೀನು ಆನು ತಾನು
ನಾಕ ನಾಕ ತಂತಿಮ್ಯಾಲ ಐತಿ
ನಮ್ಮದು ನಿಮ್ದು ಸಂತಿ
ಸರಸಕ್ಕ ಹುಟ್ತಿವು ವಿರಸಕ್ಕ ಸಾಯ್ತಿವು
ಸಮರಸಕ್ಕ ಬಡದ್ಯಾಡ್ತಿವು
ಅಲ್ಲಲ್ಲ ಬದಕಿರ್ತಿವು.. ಇಷ್ಟೆಲ್ಲಾ ಹೇಳಿ
ಯಾರಿಗೂ ಹೇಳೋಣು ಬ್ಯಾಡ ಅಂತ
ಕಲ್ಪನೆಯ ಕುಲುಮ್ಯಾಗ ಕುಲುಕುಲು ನಗ್ತಿದ್ದ ನಮ್ಮಜ್ಜ..
ನನಗ ಮಾಸ್ತರ್ ಅಂದ್ರು ತಪ್ಪಾಗುದಿಲ್ಲ
ಅಜ್ಜ ಅಂದ್ರ ಅಜ್ಜ ಎಲ್ಲಾದ್ಕು ಸಜ್ಜ್
ಖಾಕಿ ಮಂದಿಗಿ ಅಂಜಲಿಲ್ಲ
ಶೋಕಿಯಂತು ಮಾಡ್ಲಿಲ್ಲ..
ಚನ್ನಮಲ್ಲಪ್ಪನ(ಮಧುರಚೆನ್ನ) ಗೆಳತನದಾಗ
ಸಣ್ಣ ಕಲ್ಲನ್ನೂ ಹುಡಕಲಿಲ್ಲ..
ಶಕುನದ ಹಕ್ಕಿ ಬಾಯಾಗೂ ಶುಭವನ್ನೆ ನುಡಿಸಿ
ಸಾವಿನ ನೋವಿಗೂ ನೋವಿನ ಸಾವಿಗೂ
ಕವಿತಾದಾಗ ಜೀವಂತಿರಸಿ
ಜೀವನಾನ ಭೋದಿಸಾಂವ ನಮ್ಮಜ್ಜ
ನನಗಂತು ಬಾಳಸಾರ್ತಿ
ಭಾವನಾತ್ಮ ಬದುಕಿನ ಭ್ರಹ್ಮಾಂಡಾನ ಅನಸ್ತಾನಂವ.. ನಮ್ಮಜ್ಜ..
ನನಗ ಮಾಸ್ತರ್ ಅಂದ್ರು ತಪ್ಪಾಗುದಿಲ್ಲ.
- ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.
