ರಾಯಚೂರು/ ಸಿಂಧನೂರು: ಎಡಿಎಲ್‌ಆರ್ 2 ಎ4 ಶೀಟ್ ಕೇಳಿದ್ದಾರೆಂಬ ಆರೋಪ, ಭಾಜಾ-ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ತಹಶೀಲ್ದಾರರ ಕಾರ್ಯಾಲಯಕ್ಕೆ ತಂದ ಕೆಆರ್‌ಎಸ್ ಕಾರ್ಯಕರ್ತರು !
ಇದೇನಿದು ಎಂದು ಕಣ್ ಕಣ್ ಬಿಟ್ಟು ನೋಡಿದ ಸಾರ್ವಜನಿಕರು !! ಇಂಥದ್ದೊಂದು ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಸಾರ್ವಜನಿಕರ ಅಚ್ಚರಿಗೆ ಕಾರಣವಾಯಿತು. ಭಾಜಾ-ಭಜಂತ್ರಿ ಬಾರಿಸುತ್ತಾ, ಜಾಂಜ್ ಸಪ್ಪಳ ಮಾಡುತ್ತಾ ಎ4 ಸೀಟ್‌ನ 2 ಬಂಡಲ್‌ಗೆ ಹೂಮಾಲೆ ಹಾಕಿಕೊಂಡು ತಹಸೀಲ್ ಆಫೀಸ್‌ನ ಕಾರ್ಯಾಲಯದ ಆವರಣಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಪ್ರವೇಶಿಸಿದರು.
ʼಎಡಿಎಲ್‌ಆರ್ ಸಾಹೇಬರನ್ನು ಕರೆಯಿರಿʼ
“ಎಡಿಎಲ್‌ಆರ್ ಸಾಹೇಬರು ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ಸರ್ವೆ ಇಲಾಖೆಯಿಂದ ಜಮೀನಿನ ಫಾರ್ಮ್ ನಂ.10 ಹಾಗೂ ಹಿಸ್ಸಾ ನಕಾಶೆ ಕೇಳಿದ್ದಕ್ಕೆ ವಾರಗಳವರೆಗೆ ಕಾಯಿಸಿದ್ದಲ್ಲದೇ ಕೊನೆಗೆ 10 ದಿನದ ನಂತರ ದಾಖಲೆ ಕೊಟ್ಟಿದ್ದಾರೆ. ದಾಖಲೆ ಕೊಟ್ಟ ನಂತರ ನಮ್ಮ ಕಾರ್ಯಕರ್ತನಿಗೆ ಹಾಗೆ ಹೋದರೆ ಹೇಗೆ ನೀವು, ಅಂಗಡಿಯಲ್ಲಿ 2 ಎ4 ಸೀಟ್‌ನ ಬಂಡಲ್ ತಂದು ಕೊಡಿ ಎಂದು ಕೇಳಿದ್ದಾರೆ. ಹಾಗಾಗಿ ಗೌರವಪೂರ್ವಕವಾಗಿ ಮೆರವಣಿಗೆಯಲ್ಲಿ 2 ಎ4 ಸೀಟ್ ತಂದು ಅವರಿಗೆ ಕೊಡಲು ಬಂದಿದ್ದೇವೆ ಸಾಹೇಬರನ್ನು ಕರೆಯಿರಿ” ಎಂದು ಭೂದಾಖಲೆಗಳ ಇಲಾಖೆಯ ಕೆಳ ಹಂತದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಂತೆ ತಬ್ಬಿಬ್ಬಾದರು !
ಮತ್ತೆ ಕೆಲ ಕ್ಷಣದವರೆಗೆ ಭಾಜಾ-ಭಜಂತ್ರಿ ಬಾರಿಸಿ, ಜಾಂಜ್ ಸಪ್ಪಳ ಮಾಡಿದ ಕಾರ್ಯಕರ್ತರು “ಸಾಹೇಬರನ್ನು ಕರೆಯಿರಿ ಪಾಪ ನಾವು ಅವರಿಗೆ ಎ4 ಶೀಟು ಕೊಡಬೇಕು” ಎಂದು ಪಟ್ಟು ಹಿಡಿದರು, ಇದಕ್ಕೆ ಭೂದಾಖಲೆಗಳ ಇಲಾಖೆಯ ಕೆಳ ಹಂತದ ಅಧಿಕಾರಿಯೊಬ್ಬರು “ಇಲ್ಲ ಸಾಹೇಬರು, ಗೂಗಲ್ ಮೀಟಿಂಗ್‌ನಲ್ಲಿದ್ದಾರೆ” ಎಂದು ಮನವೊಲಿಸಲು ಮುಂದಾದರಾದರೂ ಕಾರ್ಯಕರ್ತರು ಮಣಿಯಲಿಲ್ಲ.
ಆಡಿಯೋ ದಾಖಲೆ ಪ್ರದರ್ಶಿಸಿದ ಕಾರ್ಯಕರ್ತರು
“ನಮ್ಮ ಕಾರ್ಯಕರ್ತರೊಬ್ಬರು ಸರ್ವೆ ಇಲಾಖೆಯಲ್ಲಿ ಫಾರ್ಮ್ ನಂ.10, ಹಿಸ್ಸಾ ನಕಾಶೆ ಕೇಳಿದ್ದಕ್ಕೆ ಹಣ ಕೇಳಿದ್ದಾರೆ. ಹಣ ಕೊಡದೇ ಇದ್ದಾಗ ಸತಾಯಿಸಿ 10 ದಿನಗಳ ನಂತರ ದಾಖಲೆ ಕೊಟ್ಟು, ಎ4 ಶೀಟ್‌ಗೆ ಬೇಡಿಕೆ ಇಟ್ಟಿದ್ದಾರೆ. ತಹಶೀಲ್ದಾರರ ಕಾರ್ಯಾಲಯದಲ್ಲಿರುವ ಸರ್ವೆ ಇಲಾಖೆಗೆ ಎ4 ಶೀಟ್ ಇಲ್ಲದಿರುವಷ್ಟು ಗತಿಗೇಡು ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದಾಖಲೆಗಳನ್ನು ಪಡೆಯಲು ಸರ್ಕಾರದ ನಿಯಮಗಳ ಅನ್ವಯ ಸಾರ್ವಜನಿಕರು ಹಣ ಪಾವತಿಸಿದರೂ ಪುನಃ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು, ಇನ್ನಿಲ್ಲದಂತೆ ಪೀಡಿಸುತ್ತಿರುವುದು ಎ4 ಶೀಟು ತಂದುಕೊಡಿ, ಇಲ್ಲವೇ ಮತ್ತೊಂದು ತಂದುಕೊಡಿ ಎಂದು ಕೇಳಿದರೆ ಸಾರ್ವಜನಿಕರು ಏನು ಮಾಡಬೇಕು ಎಂದು ಕೆಆರ್‌ಎಸ್ ರಾಜ್ಯ ಯುವ ಘಟಕದ ಮುಖಂಡ ನಿರುಪಾದಿ ಗೋಮರ್ಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸರ್ವೆ ಇಲಾಖೆಯ ಅಧಿಕಾರಿಗಳು ಎ4 ಶೀಟ್‌ಗಾಗಿ ಬೇಡಿಕೆ ಇಟ್ಟಿರುವ ಆಡಿಯೋವನ್ನು ಕೆಆರ್‌ಎಸ್ ಮುಖಂಡರು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ತಾಲೂಕ ಮಾಜಿ ಅಧ್ಯಕ್ಷ ಚನ್ನಬಸವ ಸೋಮಲಾಪುರ, ತಾಲೂಕ ಕಾರ್ಯದರ್ಶಿ ಕೃಷ್ಣ ಸುಕಾಲಪೇಟೆ, ಮುಖಂಡರಾದ ಮಹೆಬೂಬ್, ಮುರ್ತುಜಾ ಖಾದ್ರಿ, ರಮೇಶ್, ನಾಗರಾಜ್ ಇನ್ನಿತರರಿದ್ದರು.
