ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ವಚನಕಾರ ಶರಣ ಶ್ರೀ ಮಡಿವಾಳ ಮಾಚಿದೇವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಪುಪ್ಪಾರ್ಚನೆ ಮಾಡುವುದರ ಮೂಲಕ ಗೌರವ ಸಲ್ಲಿಸುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಮತ್ತು ಸಾಹಿತ್ಯಿಕ ಕ್ರಾಂತಿ ಆಗಿತ್ತು. ಅದರಲ್ಲೂ ಜನಸಾಮಾನ್ಯರ ಆಡು ಭಾಷೆಯಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ತಮ್ಮ ವಚನ ಸಾಹಿತ್ಯದ ಮೂಲಕ ಶರಣರು ಶ್ರಮಿಸಿದ್ದರು. ಕಲ್ಯಾಣದಲ್ಲಿ ಬಿಜ್ಜಳನ ಕೊಲೆಯಾದ ನಂತರ ಶರಣರ ಕಗ್ಗೊಲೆ ಹಾಗೂ ವಚನಗಳ ಕಟ್ಟುಗಳನ್ನು ಸುಟ್ಟುಹಾಕಲಾಯಿತು. ಮುಂಚಿತವಾಗೇ ಈ ಘಟನೆಯನ್ನು ಅರಿತ ತ್ರಿಕಾಲ ಜ್ಞಾನಿ ಚನ್ನಬಸವಣ್ಣನ ನೇತೃತ್ವದಲ್ಲಿ ಅಕ್ಕ ನಾಗಮ್ಮ, ಮಡಿವಾಳ ಮಾಚಿದೇವ ಹಾಗೂ ಅನೇಕ ಶರಣರು ವಚನದ ಗಂಟುಗಳನ್ನು ಹೊತ್ತು ರಾತ್ರಿಯಲ್ಲೇ ಉಳವಿಯ ಕಡೆಗೆ ಸಂಚರಿಸಿದರು. ಈ ಸಮಯದಲ್ಲಿ ಮಡಿವಾಳ ಮಾಚಿದೇವರು ಆಕ್ರಮಣಕ್ಕೆ ಬಂದವರ ವಿರುದ್ಧ ಕತ್ತಿ ಹಿಡಿದು ಹೋರಾಡಿ ಹಿಮ್ಮೆಟ್ಟಿಸಿದರು. ಹೀಗೆ ವಚನಗಳ ಸಂರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಹಿರಿದಾಗಿದೆ. ಮಡಿವಾಳ ಮಾಚಿದೇವರು ಬರೀ ಶರಣದ ಮಲಿನ ಬಟ್ಟೆಗಳನ್ನು ಮಾತ್ರ ತೊಳೆಯಲಿಲ್ಲ, ಅಂದಿನ ಸಮಾಜದ ಮಲಿನತೆಯನ್ನು ತೊಳೆಯಲು ಶ್ರಮಿಸಿದ್ದಾರೆ ಎಂದು ಅವರ ಬದುಕನ್ನು ಸ್ಮರಿಸಿದರು.
ಈ ಸಮಯದಲ್ಲಿ ತಹಶೀಲ್ದಾರ್ ಗ್ರೇಡ್-2 ಪ್ರತಿಭಾ ಎಂ, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಕೊಟ್ಟೂರು ಮಡಿವಾಳ ಸಮಾಜದ ಅಧ್ಯಕ್ಷರಾದ ಭೀಮಪ್ಪ, ಮುಖಂಡರಾದ ನಾಗಪ್ಪ, ಬಸವರಾಜಪ್ಪ, ಕೊಟ್ರೇಶಪ್ಪ, ಗುರುಬಸವರಾಜ, ಗೂರಪ್ಪ, ಸಿದ್ದಪ್ಪ, ಸುರೇಶ, ಕಛೇರಿಯ ಸಿಬ್ಬಂದಿ ಹಾಜರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
