ಮಕ್ಕಳು ನಮ್ಮೆಲ್ಲರ ಹೆಮ್ಮೆ ಮತ್ತು ಭವಿಷ್ಯದ ಆಧಾರ.
ವಿದ್ಯೆಯೊಂದಿಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ಅವಶ್ಯಕ, ಏಕೆಂದರೆ ವಿದ್ಯೆ ಅವರಿಗೆ ಜ್ಞಾನವನ್ನು ನೀಡಿದರೆ, ಸಂಸ್ಕಾರ ಅವರ ವ್ಯಕ್ತಿತ್ವವನ್ನು ಮತ್ತು ನೈತಿಕತೆಯನ್ನು ರೂಪಿಸುತ್ತದೆ. ಇಂದಿನ ವೇಗವಾದ ಜಗತ್ತಿನಲ್ಲಿ, ಮೌಲ್ಯಗಳು ಮತ್ತು ಸಂಸ್ಕಾರದ ಪ್ರಾಮುಖ್ಯತೆಯನ್ನು ಪುನಃ ಸ್ಥಾಪಿಸಲು ನಮ್ಮೆಲ್ಲರ ಪ್ರಯತ್ನ ಅಗತ್ಯವಾಗಿದೆ.
ಸಂಸ್ಕಾರವು ಮಕ್ಕಳಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಶ್ರದ್ಧೆ, ಶಿಷ್ಟಾಚಾರ ಮತ್ತು ಕಾಳಜಿಯ ಗುಣಗಳನ್ನು ಬೆಳೆಸುತ್ತದೆ. ಈ ಗುಣಗಳು ಅವರ ಜೀವನವನ್ನು ಸಮೃದ್ಧಗೊಳಿಸುತ್ತವೆ ಮತ್ತು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತವೆ. ವಿದ್ಯೆಯನ್ನು ಮಾತ್ರ ಕಲಿಸುವುದರಿಂದ ಅವರು ಜ್ಞಾನಿಗಳಾಗಬಹುದು, ಆದರೆ ಸಂಸ್ಕಾರವಿಲ್ಲದೆ ಅವರು ಬದುಕಿನ ಸಾರ್ಥಕತೆಯನ್ನು ಅರಿಯಲು ಸಾಧ್ಯವಿಲ್ಲ.
ಸಂಸ್ಕಾರ ಹೇಗೆ ಕಲಿಸಬಹುದು?
- ಮನೆ: ಪ್ರಥಮ ಪಾಠಶಾಲೆ:
ಮಕ್ಕಳು ಮನೆಯಲ್ಲಿಯೇ ತಮ್ಮ ಪ್ರಥಮ ಪಾಠಗಳನ್ನು ಕಲಿಯುತ್ತಾರೆ.
ತಂದೆ-ತಾಯಿಯ ನಡತೆ, ಮಾತುಗಳು, ಮತ್ತು ಜೀವನಚಟುವಟಿಕೆಗಳು ಮಕ್ಕಳಿಗೆ ಮಾದರಿಯಾಗುತ್ತವೆ.
ಒಳ್ಳೆಯ ಗುಣಗಳನ್ನು ಬಿತ್ತುವ ಮೂಲಕ ನಾವು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಬೀಜಗಳನ್ನು ಬಿತ್ತಬಹುದು.
- ಶಾಲೆಯ ಪಾತ್ರ:
ಶಿಕ್ಷಕರು ಮಕ್ಕಳ ಬದುಕಿನಲ್ಲಿ ದ್ವಿತೀಯ ಪೋಷಕರಂತೆ ಕಾರ್ಯನಿರ್ವಹಿಸುತ್ತಾರೆ.
ಮೌಲ್ಯಾಧಾರಿತ ಪಾಠಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬಹುದು.
ಮಕ್ಕಳನ್ನು ವಿನಯ, ಶ್ರದ್ಧೆ, ಮತ್ತು ಸಹಾನುಭೂತಿಗೆ ಪ್ರೋತ್ಸಾಹಿಸಬೇಕು.
- ಸಮಾಜ ಮತ್ತು ಪರಿಸರ:
ಮಕ್ಕಳಿಗೆ ಸಂಸ್ಕೃತಿಯ ಮಹತ್ವವನ್ನು ತಿಳಿಸಲು ಹಬ್ಬಗಳು, ಆಚರಣೆಗಳು, ಮತ್ತು ಪರಂಪರೆಗಳನ್ನು ಪರಿಚಯಿಸಬೇಕು.
ಸಾಮಾಜಿಕ ಪ್ರಜ್ಞೆ ಮತ್ತು ಸಹಕಾರದ ಮಹತ್ವವನ್ನು ಬೋಧಿಸಬೇಕು.
ಸಂಸ್ಕಾರವನ್ನು ಏಕೆ ಕಲಿಸಬೇಕು?
1.ವ್ಯಕ್ತಿಯ ವ್ಯಕ್ತಿತ್ವಕ್ಕಾಗಿ
2.ಒಳ್ಳೆಯ ಸಂಬಂಧಗಳ ನಿರ್ಮಾಣಕ್ಕಾಗಿ.
3.ಉತ್ತಮ ಸಮಾಜದ ನಿರ್ಮಾಣಕ್ಕಾಗಿ.
4.ಅವರ ಜೀವನದಲ್ಲಿ ಸಮೃದ್ಧಿ ಮತ್ತು ಶಾಂತಿಯನ್ನು ತರಲು.
5.ಪರಸ್ಪರ ವ್ಯಕ್ತಿಗಳಿಗೆ ಗೌರವ
ನೀಡುವುದಕ್ಕಾಗಿ
ಯಾರು ಕಲಿಸಬೇಕು?
ಸಂಸ್ಕಾರ ಕಲಿಸುವುದು ಕೇವಲ ತಂದೆ-ತಾಯಿ ಅಥವಾ ಶಿಕ್ಷಕರ ಹೊಣೆಗಾರಿಕೆ ಮಾತ್ರವಲ್ಲ. ಈ ಜವಾಬ್ದಾರಿ ಪ್ರತಿ ವ್ಯಕ್ತಿಯದ್ದೂ ಆಗಿದೆ. ಹೃದಯ ಪೂರ್ವಕ ಪ್ರೇರಣೆ, ಪ್ರೀತಿ, ಮತ್ತು ಶ್ರದ್ಧೆಯಿಂದ ಸಂಸ್ಕಾರ ಕಲಿಸಿದರೆ ಅದು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗುತ್ತದೆ.
ಕೊನೆಯದಾಗಿ
ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಬೆಳೆಸುವುದರ ಮೂಲಕ, ನಾವು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಮಹತ್ವದ ಕೆಲಸವನ್ನು ಮಾಡಬೇಕು. “ಶಿಕ್ಷಣವೇ ಶಕ್ತಿ, ಆದರೆ ಸಂಸ್ಕಾರವೇ ಆ ಶಕ್ತಿಯ ಬೆಳಕು.”
“ಸಂಸ್ಕಾರವಿಲ್ಲದ ವ್ಯಕ್ತಿ ಪಶುಗಿಂತಲೂ ಕೀಳು” ಎಂದರೂ ತಪ್ಪಾಗಲಾರದು
ಏನಂತೀರಾ??

- ಶ್ವೇತಾ ಸಂದೀಪ್ , ಶಿವಮೊಗ್ಗ
