ಶಿವಮೊಗ್ಗ :ಸಮೀಪದ ಆಯನೂರಿನಲ್ಲಿರುವ ಅಗಸ್ತ್ಯ ಫೌಂಡೇಶನ್ ನ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕಾಲ ಆಯನೂರಿನಲ್ಲಿ ವಿಜ್ಞಾನ ಶಿಕ್ಷಕರ ಮಾದರಿ ತಯಾರಿಕಾ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಡಯಟ್ ನ ಉಪಪ್ರಾಂಶುಪಾಲರಾದ ರೇಣುಕಾ, ಹಿರಿಯ ಉಪನ್ಯಾಸಕಿಯರಾದ ಸುವರ್ಣಾ, ಶಶಿಕಲಾ , ಆಯನೂರು ಕ್ಲಸ್ಟರ್ ನ ಸಿ ಆರ್ ಪಿ ಗಳಾದ ಮಾಧವ್ ಹಾಗೂ ಡಯಟ್ ನ ಇನ್ನಿತರೆ ಉಪನ್ಯಾಸಕರು ಉದ್ಘಾಟಿಸಿದರು.
ಮಾದರಿ ತಯಾರಿಕಾ ತರಬೇತಿ ಕಾರ್ಯಾಗಾರಗಳು ನವೀನ ಆಲೋಚನೆಗಳು ಮತ್ತು ಕ್ರಿಯಾ ಶೀಲ ಮನೋಭಾವನೆಯನ್ನು ಹುಟ್ಟು ಹಾಕುತ್ತವೆ ಹಾಗೂ ವಿದ್ಯಾರ್ಥಿಗಳಿಗೆ ಈ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಹೆಚ್ಚು ಅರ್ಥಪೂರ್ಣ ಜ್ಞಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ, ಈ ರೀತಿಯಲ್ಲಿ ಜಿಲ್ಲೆಯ ಶೈಕ್ಷಣಿಕ ಹಾಗೂ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಗಸ್ತ್ಯ ಫೌಂಡೇಶನ್ ನಮ್ಮ ಜಿಲ್ಲೆಯ ಆಯನೂರಿನಲ್ಲಿರುವದು ಒಂದು ಖುಷಿಯ ವಿಚಾರ ಎಂದು ಡಯಟ್ ನ ಉಪಪ್ರಾಂಶುಪಾಲರಾದ ರೇಣುಕಾ ಅವರು ಮಾತನಾಡಿದರು.
ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವರಾಜ್ ಗೊರನಾಳ ಮಾತನಾಡಿ ನಮ್ಮ ಜೀವನದ ಉದ್ದೇಶವೇ ನಮ್ಮನ್ನು ನಾವು ಅರಿಯುವುದು ಹಾಗೂ ಜ್ಞಾನವನ್ನು ಸಂಪಾದಿಸುವದೇ ಆಗಿದೆ ಹಾಗೆ ಕಲಿತ ಜ್ಞಾನವನ್ನು ನವಪೀಳಿಗೆಗಳಿಗೆ ತಿಳಿಸುತ್ತಾ ಒಂದು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ, ಈ ದೆಸೆಯಲ್ಲಿ ಈ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಲ್ಪಡುವ ಚಟುವಟಿಕೆಗಳನ್ನು ಮಕ್ಕಳಿಗೆ ಹೇಳಿಕೊಡುವದರೊಂದಿಗೆ ಅವರನ್ನು ಸದಾ ಕ್ರಿಯಾಶೀಲರಾಗಿ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 9 ಕ್ಲಸ್ಟರ್ ನ ಸುಮಾರು 50 ವಿಜ್ಞಾನ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡರು.
ತರಬೇತಿ ಕಾರ್ಯಾಗಾರವನ್ನು ವಿಜ್ಞಾನ ಕೇಂದ್ರದ ಮಾರ್ಗದರ್ಶಕರಾದ ಶ್ವೇತಾ ಕೆ ಯಶಸ್ವಿಯಾಗಿ ನಡೆಸಿಕೊಟ್ಟರು ಹಾಗೂ ಈ ಕಾರ್ಯಾಗಾರಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳಾದ ನಾಗರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸುವದರೊಂದಿಗೆ ಅವರ ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
