ಬೀದರ್: ಬಸವಾದಿ ಶರಣರ ಸಮಾನತೆ ನೀತಿ, ಭಾವೈಕ್ಯತೆ ಮತ್ತು ಮಾನವೀಯತೆಯ ಮೌಲ್ಯಾಧಾರಿತ ಚಿಂತನೆಗಳನ್ನು ಹೊತ್ತುಕೊಂಡು ಸಾಗುತ್ತಿರುವ ಬಸವಾಭಿಮಾನಿಗಳನ್ನು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ತಾಲಿಬಾನಿಗಳಿಗೆ ಹೋಲಿಸಿರುವುದನ್ನು ಬಸವ ತತ್ವ ಅನುಯಾಯಿಗಳಾದ ಸಂಗಮೇಶ ಎನ್. ಜವಾದಿ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಖಾಸಗಿ ಸುದ್ದಿ ವಾಹಿನಿಯೊಂದರ ಚರ್ಚೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಅತಿರೇಕದ ಹೇಳಿಕೆ ಕೊಟ್ಟು ಬಸವಾಭಿಮಾನಿಗಳಿಗೆ ಬಹಳಷ್ಟು ನೋವುಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಸವಾಭಿಮಾನಿಗಳಿಗೆ ‘ಬಸವ ತಾಲಿಬಾನಿ’ ಎಂದು ಉಗ್ರವಾದಿಗಳಿಗೆ ಹೋಲಿಸಲು ಕಾರಣವೇನು, ಅವರು ಎಂದಾದರೂ ಕ್ರೌರ್ಯ ಮೆರೆದಿದ್ದಾರೆಯೇ ಅಥವಾ ಅಮಾನವೀಯ, ಅನಾಗರಿಕವಾಗಿ ವರ್ತನೆ ತೋರಿದ್ದಾರೆಯೇ, ಅವರಿಂದ ಯಾರಿಗಾದರೂ ತೊಂದರೆ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಂಥ ಉದಾಹರಣೆಯೇನಾದರೂ ಇದ್ದರೆ ಸಮಾಜದ ಮುಂದೆ ಇಡಲಿ ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾರೆ.
ಕನ್ಹೇರಿ ಮಠ ಬಸವ ಪರಂಪರೆಯ ಮಠ. ಆ ಮಠದ ಸ್ವಾಮೀಜಿಗಳ ಬಾಯಲ್ಲಿ ಈ ರೀತಿಯ ಮಾತು ಬರಬಾರದಿತ್ತು. ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎಂದಿದ್ದರು. ಭಕ್ತರೇ ಶ್ರೇಷ್ಠ ಎಂದೂ ಹೇಳಿದ್ದರು. ಗುರುವಿನ ಸ್ಥಾನದಲ್ಲಿದ್ದವರು ಬಸವಾಭಿಮಾನಿಗಳನ್ನು ಅವಮಾನಿಸುವುದು ಸರಿಯಲ್ಲ. ಇದು ಅವರ ಘನತೆಗೆ ಶೋಭೆಯಲ್ಲ ಎಂದು ಹೇಳಿದ್ದಾರೆ.
‘ಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಬಸವಣ್ಣನ’ ಎಂದು ಅಲ್ಲಮಪ್ರಭುದೇವರು ಹೇಳಿದ್ದಾರೆ. ಬಸವಣ್ಣನವರು ಅಂದಿನ ಸಮಾಜದಲ್ಲಿ ಬೇರೂರಿದ್ದ ಜಾತಿಯತೆ, ಅಸಮಾನತೆ, ಕಂದಾಚಾರ, ಮೂಢನಂಬಿಕೆ, ಲಿಂಗಭೇದ, ವರ್ಣಭೇದ, ವರ್ಗಭೇದ ಮೊದಲಾದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿದ್ದರು. ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದರು. ಜಗತ್ತಿಗೆ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ನೀಡಿದ್ದರು. ಮಾನವ ಹಕ್ಕುಗಳು, ಕಾಯಕ-ದಾಸೋಹ ತತ್ವಗಳನ್ನು ಸಾರಿದ್ದರು. ಸಮಾನತೆಯ ಸಮಾಜ ಕಟ್ಟಿದ್ದರು ಎಂಬುದು ಸ್ವಾಮಿಜಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬಸವಾಭಿಮಾನಿಗಳು ಬಸವಾದಿ ಶರಣರು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿದ್ದಾರೆ. ಅವರ ಸಂದೇಶಗಳನ್ನೇ ಬಿತ್ತುತ್ತಿದ್ದಾರೆ. ಅಂಥವರನ್ನು ‘ಬಸವ ತಾಲಿಬಾನಿ’ಗಳೆಂದು ಕರೆದಿರುವುದು ಆಘಾತಕಾರಿ ಸಂಗತಿಯಾಗಿದೆ. ಸ್ವಾಮೀಜಿ ಆದವರಿಗೆ ಇದು ಖಂಡಿತವಾಗಿಯೂ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಸ್ವಾಮೀಜಿ ಅವರ ಹೇಳಿಕೆ ನೋಡಿದರೆ ‘ಒಲೆಹತ್ತಿ ಉರಿದಡೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು ಏರಿ ನೀರುಂಬಡೆ, ಬೇಲಿ ಕೆಯ್ಯ ಮೆಲುವಡೆ ನಾರಿ ತನ್ನ ಮನೆಯಲ್ಲಿ ಕಳವಡೆ, ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವ’ ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ ಎಂದು ತಿಳಿಸಿದ್ದಾರೆ.
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಸವಾಭಿಮಾನಿಗಳಲ್ಲಿ ಕ್ಷಮೆಯಾಚಿಸಬೇಕೆಂದು ಸಂಗಮೇಶ ಎನ್ ಜವಾದಿ ಆಗ್ರಹಿಸಿದ್ದಾರೆ.
