ಕಾಯ್ದೆಯ ದುರುಪಯೋಗವನ್ನು ಮತ್ತು ದುರ್ಬಲಗೊಳಿಸುವುದನ್ನು ತಪ್ಪಿಸಿ
ಹಲವು ವರ್ಷಗಳ ಹೋರಾಟದ ಫಲವಾಗಿ ರೂಪುಗೊಂಡ ಮಾಹಿತಿ ಹಕ್ಕು ಕಾಯ್ದೆ ವಿಫಲವಾಗಬಾರದು : ನೂತನ ಮಾಹಿತಿ ಆಯುಕ್ತರಿಗೆ ಕೆ.ವಿ.ಪಿ ಕರೆ
ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವನ್ನು ಮತ್ತು ದುರ್ಬಲಗೊಳಿಸುವ ಪ್ರಯತ್ನವನ್ನು ತಪ್ಪಿಸಿ, ಸರ್ಕಾರದ ಸಾಮಾಜಿಕ ನ್ಯಾಯದ ಗುರಿಯನ್ನು ಈಡೇರಿಸಿ ಎಂದು ನೂತನವಾಗಿ ನೇಮಕಗೊಂಡ ಮಾಹಿತಿ ಹಕ್ಕು ಆಯುಕ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಪತ್ರಕರ್ತರು ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾದ ಪತ್ರಕರ್ತರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿ ರಾಜ್ಯ ಸರ್ಕಾರಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಪತ್ರಕರ್ತರು ಮಾಹಿತಿ ಆಯೋಗದ ಆಯುಕ್ತರುಗಳಾಗಿದ್ದಾರೆ ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರುಗಳಾಗಿದ್ದಾರೆ. ನಿಮ್ಮೆಲ್ಲರ ಮೇಲೆ ಸರ್ಕಾರದ ಮತ್ತು ಸಾಮಾಜಿಕ ನ್ಯಾಯದ ಜವಾಬ್ದಾರಿಗಳಿವೆ. ಈ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎನ್ನುವ ಭರವಸೆ ವ್ಯಕ್ತಪಡಿಸಿದರು.
2005 ರಲ್ಲಿ ಜಾರಿಗೆ ಬಂದ ಈ ಮಾಹಿತಿ ಹಕ್ಕು ಕಾಯ್ದೆಗೆ
ಅಕ್ಟೋಬರ್ 12 ಕ್ಕೆ ಈ ಕಾಯ್ದೆಗೆ 20 ವರ್ಷ ತುಂಬುತ್ತಿದೆ.
ರಾಜಸ್ಥಾನದ ದೇವದುಂಗ್ರಿ ಎಂಬ ಹಳ್ಳಿಯಲ್ಲಿ
ಅರುಣಾ ರಾಯ್ (ನಿವೃತ್ತ ಐ.ಎ.ಎಸ್ ಅಧಿಕಾರಿ), ನಿಖಿಲ್ ದವೆ ಮತ್ತಿತರ ಚಳುವಳಿಗಾರರ ಮೂಲಕ 1987ರಲ್ಲಿ ಮೊಳಕೆಯೊಡೆದ ಈ ಕನಸು, ಚಳವಳಿ ರೂಪ ಪಡೆದು ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲು 2005ರ ತನಕ ಕಾಯಬೇಕಾಯಿತು ಎಂದರು.
ಕೇಂದ್ರದಲ್ಲಿದ್ದ UPA -1 ಕಾಂಗ್ರೆಸ್ ಸರಕಾರದಲ್ಲಿ
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾಗಾಂಧಿಯವರ ಒಟ್ಟು ಇಚ್ಚಾಶಕ್ತಿಯ ಫಲವಾಗಿ ಕಾಯ್ದೆ ಜಾರಿಗೆ ಬಂದಿದೆ.
18 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಕಾಯ್ದೆ ಜಾರಿ ಆಗಿ 20 ವರ್ಷಗಳಲ್ಲಿ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎನ್ನುವ ಅಸಮಾಧಾನ ವ್ಯಕ್ತ ಆಗುತ್ತಿದೆ.
ಇತ್ತೀಚಿಗೆ ಸುಪ್ರೀಂಕೋರ್ಟ್ ಕೂಡಾ ಇದೇ ಅಸಮಾಧಾನವನ್ನು ಹೊರ ಹಾಕಿದೆ.
ಮಾಹಿತಿ ಹಕ್ಕು, ಸಂವಿಧಾನದ 19 (1) (ಎ) ವಿಧಿಯನ್ವಯ ಮೂಲಭೂತವಾದ ಹಕ್ಕು ಎಂದು ನ್ಯಾಯಾಂಗವು ಹಲವು ಬಾರಿ ಹೇಳಿದೆ. ಇದಕ್ಕೆ ಪೂರಕವಾಗಿ ಆಯುಕ್ತರು ಕಾರ್ಯ ಪ್ರವೃತ್ತರಾಗಬೇಕು ಎಂದು ಆಶಿಸಿದರು.
ಇದರ ಜೊತೆಗೆ ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳುವವರ, ಬ್ಲಾಕ್ ಲೀಸ್ಟ್ ಗೆ ಸೇರುವ ಮಾಹಿತಿ ಹಕ್ಕು ಕಾರ್ಯಕರ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಮತ್ತೊಂದು ಕಡೆ RTI ಕಾರ್ಯಕರ್ತರ ಕೊಲೆ ಪ್ರಕರಣಗಳೂ ಮೇಲಿಂದ ಮೇಲೆ ವರದಿ ಆಗುತ್ತಲೇ ಇವೆ. ವಿಳಂಬಿತ ನ್ಯಾಯವೂ ನ್ಯಾಯದ ನಿರಾಕರಣೆಯೇ ಎನ್ನುತ್ತದೆ ನ್ಯಾಯಶಾಸ್ತ್ರ. ಪರಿಣಾಮಕಾರಿಯಾದ ಕಾನೂನೊಂದರ ಸುಗಮ ಅನುಷ್ಠಾನಕ್ಕೆ ಹಿಂಬಾಗಿಲ ಅಡ್ಡಿಗಳನ್ನು ಒಡ್ಡುವ ಮೂಲಕ, ಆ ಕಾನೂನನ್ನು ಕೆಲಸಕ್ಕೆ ಬಾರದಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಈ ಸವಾಲುಗಳನ್ನೂ ನೂತನ ಆಯುಕ್ತರಾದ ಪತ್ರಕರ್ತರು ನಿರ್ವಹಿಸಬೇಕು, ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ನನ್ನ ಎಲ್ಲಾ ಸ್ನೇಹಿತರೂ ತಮ್ಮ ಪಾಲಿಗೆ ಒದಗಿ ಬಂದಿರುವ ಈ ಅವಕಾಶದಲ್ಲಿ ಕಾಯ್ದೆಯ ಗುರಿ ಮತ್ತು ಉದ್ದೇಶಗಳನ್ನು ರಕ್ಷಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.
2013-2018 ರ ವರೆಗೆ ಭ್ರಷ್ಟಾಚಾರ ರಹಿತ ಆಡಳಿತದ ಮಾದರಿ ಮುಖ್ಯಮಂತ್ರಿ. ಮಾದರಿ ಸರ್ಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಹಳ ನಿರೀಕ್ಷೆಗಳ ಜೊತೆಗೆ ನಿಮ್ಮನ್ನು ನೇಮಕ ಮಾಡಿದೆ. ಅವರ ನಿರೀಕ್ಷೆ ಸುಳ್ಳಾಗದ ರೀತಿಯಲ್ಲಿ ನಿಮ್ಮಗಳ ಕಾರ್ಯಕ್ಷಮತೆ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಆಶಿಸಿದರು.
ನೂತನ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದ್ದೀನ್, ಮಮತಾಗೌಡ, ರಾಜಶೇಖರ್, ಮಮತಾಗೌಡ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ, ಚಿದಾನಂದ ಪಾಟೀಲ್ ಅವರು ಸನ್ಮಾನಿತರಾದರು.
ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕರಾದ ಎಚ್.ಬಿ.ದಿನೇಶ್, KUWJ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್.ಕಾರ್ಯದರ್ಶಿ ಸೋಮಶೇಖರ್ ಕೆರಗೋಡು,ಖಜಾಂಚಿ ವಾಸುದೇವ ಹೊಳ್ಳ ಅವರು ಉಪಸ್ಥಿತರಿದ್ದರು.
