ವಿಜಯಪುರ/ ಇಂಡಿ: ಪ್ರತಿ ವರ್ಷ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸುವ ಸಮಯದಲ್ಲಿಯೇ ಚುನಾವಣೆಗಳು ಘೋಷಣೆಯಾಗುತ್ತಿದ್ದು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅಂಬೇಡ್ಕರ್ ಅವರ ಜಯಂತಿಯನ್ನು ರಾಜ್ಯ ಸರ್ಕಾರ, ಜಿಲ್ಲೆ, ತಾಲೂಕ ಆಡಳಿತ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿಯೂ ಜಿ.ಪಂ, ತಾ.ಪಂ. ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ. ಆದ ಕಾರಣ ಏ.14 ಮುಗಿಯೋವರೆಗೆ ಜಿ.ಪಂ, ತಾ.ಪಂ, ಚುನಾವಣೆ ಘೋಷಣೆ ಮಾಡದಂತೆ ಸಿ.ಎಂ ಸಿದ್ದರಾಮಯ್ಯನವರು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಕಾಂಬಳೆ ಅವರು ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಈ ವಿಷಯ ಕುರಿತು ಮನವಿ ಪತ್ರವನ್ನು ಸಿ.ಎಂ ಸೇರಿದಂತೆ ಜಿಲ್ಲೆ, ರಾಜ್ಯಮಟ್ಟ ಅಧಿಕಾರಿ, ಸಚಿವರಿಗೆ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯನ್ನು ಮೈಗೂಡಿಸಿಕೊಂಡು ಅವರ ಆದರ್ಶವನ್ನು ಮಾದರಿಯಾಗಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024 ರಲ್ಲಿ ಭಾರತ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಸಂದ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಿ ಜಾಗೃತಿ ಮೂಡಿಸಿದರು. ಅದಕ್ಕೆ ಸರಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಛಲವಾದಿ ನೌಕರರ ಸಂಘ ರಾಜ್ಯ ಸಮಿತಿ ಕೋಟಿ ಕೋಟಿ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ವರದಿ ಮನೋಜ್ ನಿಂಬಾಳ
