
ಬೀದರ್/ ಬಸವಕಲ್ಯಾಣ : ಪ್ರತಿ ವರ್ಷದಂತೆ ದಿ. 26.02.2025 ಬುಧವಾರ ಸಾಯಂಕಾಲ 04:00 ಗಂಟೆಗೆ ಬಸವಕಲ್ಯಾಣದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಸಂಸ್ಥಾನ ಗವಿಮಠ ಟ್ರಸ್ಟ್, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಮತ್ತು ಸಮಸ್ತ ಸದ್ಭಕ್ತರ ಸಹಯೋಗದಲ್ಲಿ ಮಹಾಶಿವರಾತ್ರಿ ನಿಮಿತ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಮಹಾಶಿವರಾತ್ರಿಯು ಒಂದು ಪವಿತ್ರ ಹಾಗೂ ಶ್ರೇಷ್ಠ ದಿನ. ಆ ಮಹಾಶಿವನನ್ನು ನಾವು ಇಷ್ಟಲಿಂಗ ರೂಪದಲ್ಲಿ ನಿತ್ಯ ಪೂಜಿಸುತ್ತೇವೆ. ಇಂದು ಆ ಮಹಾ ಶಿವನು ಕೈಲಾಸದಿಂದ ಭೂಲೋಕಕ್ಕೆ ಬಂದು ತನ್ನನ್ನು ಪೂಜಿಸುವ ಭಕ್ತರಿಗೆ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿಂದ ಇಂದು ಮಹಾ ಶಿವನಿಗೆ ವಿಶೇಷ ಪೂಜೆ ಗೈದು ಆರಾಧಿಸುವ ಪರಂಪರೆ ನಮ್ಮ ಭಾರತೀಯ ಧರ್ಮ ಹಾಗೂ ಸಂಸ್ಕೃತಿ. ಹೀಗಾಗಿ ಪ್ರತಿವರ್ಷ ನಾವು ಹಾಗೂ ಭಕ್ತರು ಸೇರಿ ನಮ್ಮ ಗವಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದೇವೆ. ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಆ ಮಹಾ ಶಿವನ ಕೃಪೆ ಸದಾ ನಿಮ್ಮೆಲ್ಲರಿಗೆ ದೊರೆಯಲಿ ಎಂದು ಭಕ್ತರಿಗೆ ಆಶೀರ್ವದಿಸಿದರು.
ಮಹಾಶಿವರಾತ್ರಿಯ ಮಹತ್ವ ಹಾಗೂ ಗವಿಮಠ ಪರಂಪರೆ ಕುರಿತು ನಗರದ ಪುಣ್ಯಕೋಟಿ ಮಹಾವಿದ್ಯಾಲಯದ ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಮಾತನಾಡುತ್ತಾ ಮಹಾ ಶಿವನ ಸ್ವರೂಪವಾದ ಇಷ್ಟಲಿಂಗವನ್ನು ಗುರು, ಲಿಂಗ, ಜಂಗಮ ಎಂದು ಪೂಜಿಸುವುದು ನಮ್ಮ ಧರ್ಮದ ವೈಶಿಷ್ಟತೆ. ಹಾಗೇ ಗವಿಮಠದ ಪೂಜ್ಯರು ಪ್ರತಿವರ್ಷ ನಮಗೆ ಮಹಾಶಿವರಾತ್ರಿ ಪವಿತ್ರ ದಿನದಂದು ಇಷ್ಟಲಿಂಗ ಪೂಜೆ ಮಾಡಿಸುವುದರ ಮೂಲಕ ಧರ್ಮ ಸಂಸ್ಕಾರ ಕೊಟ್ಟು ಪೂಣ್ಯ ಸಂಪಾದನೆಗೆ ಅವಕಾಶ ಕಲ್ಪಿಸಿದ್ದು ನಮ್ಮೆಲ್ಲ ಸದ್ಭಕ್ತರ ಭಾಗ್ಯ ಎಂದು ಕೃತಜ್ಞತೆ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಅಪಾರ ಸದ್ಭಕ್ತರು ಪಾಲ್ಗೊಂಡು ಇಷ್ಟಲಿಂಗ ಪೂಜೆ ಗೈದು ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆದು ಹಣ್ಣು ಹಾಗೂ ಪಾಯಸ ಪ್ರಸಾದ ಸ್ವೀಕರಿಸಿ ಧನ್ಯರಾದರು. ವೇ.ನೀಲಕಂಠಯ್ಯ ಮಠ ಮಂಠಾಳ ಪುರೋಹಿತ ಕಾರ್ಯ ಮಾಡಿದರು. ಅದಕ್ಕೂ ಮುಂಚೆ ಪೂಜ್ಯ ಶ್ರೀ ಡಾ.ಅಭಿನವ ಘನಲಿಂಗ ಗುರುಗಳು ಭಕ್ತರಿಗೆ ಇಷ್ಟಲಿಂಗ ದೀಕ್ಷೆ ಕರುಣಿಸಿದರು.
ವರದಿ : ಶ್ರೀನಿವಾಸ ಬಿರಾದಾರ
